ಮಡಿಕೇರಿ: ಉಕ್ರೇನ್‍ನಲ್ಲಿ ಕರ್ನಾಟಕದ ನೂರಾರು ವಿದ್ಯಾರ್ಥಿಗಳು ಸಿಲುಕಿರುವ ಹಿನ್ನೆಲೆಯಲ್ಲಿ ಅಲ್ಲಿ ಸಿಲುಕಿರುವವರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಮುಂಜಾಗ್ರತೆ ವಹಿಸಿದೆ. ಅಲ್ಲದೆ ನಮ್ಮ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದಲೂ ಒಬ್ಬರು ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.ಮಡಿಕೇರಿಯಲ್ಲಿ ಅಂತ್ಯೋದಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಕ್ರೇನ್‍ನಲ್ಲಿ ಸಿಲುಕಿರುವ ನಾಗರಿಕರ ಜೊತೆಗೆ ನಿನ್ನೆಯೇ ರಾಜ್ಯದ 12 ವಿದ್ಯಾರ್ಥಿಗಳನ್ನು ಕರೆತರಲಾಗಿದೆ. ಸಂಪರ್ಕದ ಕೊರತೆ ಮತ್ತು ಏನು ಆಗುವುದಿಲ್ಲ ಎಂಬ ಮನೋಭಾವದಿಂದ ಕೆಲವು ವಿದ್ಯಾರ್ಥಿಗಳು ಅಲ್ಲಿಯೇ ಉಳಿದುಕೊಂಡಿದ್ದಾರೆ. ಅಲ್ಲದೇ ಅಲ್ಲೇ ಉಳಿದುಕೊಂಡಿರುವವರ ಸಮೀಕ್ಷೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನನ್ನ ಇಲಾಖೆಯಿಂದಲೂ ಒಬ್ಬರು ಅಧಿಕಾರಿಯನ್ನು ಇದಕ್ಕಾಗಿ ನೇಮಿಸಲಾಗಿದೆ. ಅಲ್ಲಿ ಒಂದಷ್ಟು ಜನರಿಗೆ ಆಹಾರದ ಕೊರತೆಯೂ ಎದುರಾಗಿದೆ. ಅದನ್ನು ನಿಭಾಯಿಸುವ ಕೆಲಸ ಆಗುತ್ತಿದೆ. ಈಗಾಗಲೇ ದೂರವಾಣಿ ಮೂಲಕ ವಿದ್ಯಾರ್ಥಿಗಳ ಜೊತೆ ಮಾತಾನಾಡಿ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ ಎಂದರು.