ಧಾರವಾಡ, ಫೆಬ್ರವರಿ 28; ಸಾವಿನ ರಸ್ತೆ ಎಂದು ಖ್ಯಾತಿ ಪಡೆದಿರುವ
ಹುಬ್ಬಳ್ಳಿ
-ಧಾರವಾಡ ಬೈಪಾಸ್ ರಸ್ತೆ ಅಗಲೀಕರಣಕ್ಕೆ ಸೋಮವಾರ ಚಾಲನೆ ಸಿಗಲಿದೆ.
1014.79 ಕೋಟಿ ರೂ. ವೆಚ್ಚದಲ್ಲಿ 6 ಪಥದ ರಸ್ತೆ ನಿರ್ಮಾಣವಾಗಲಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಅಗಲೀಕರಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಲಿದ್ದಾರೆ. ಸುಮಾರು 30.6 ಕಿ. ಮೀ. ರಸ್ತೆಯ ಅಗಲೀಕರಣ ಕಾಮಗಾರಿ 2 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.
ಸಾವಿನ ರಸ್ತೆ ಕುಖ್ಯಾತಿಯ ಹುಬ್ಬಳ್ಳಿ-ಧಾರವಾಡ ಬೈಪಸ್ ಅಗಲೀಕರಣ
ಹುಬ್ಬಳ್ಳಿಯ ಗಬ್ಬೂರು ಎನ್. ಎಚ್. 4 ರಸ್ತೆಯ 402.6 ಕಿ. ಮೀ. ಇಂದ ಧಾರವಾಡದ ನರೇಂದ್ರ ಕ್ರಾಸ್‌ನ 433.2 ಕಿ. ಮೀ. ವರೆಗೆ 6 ಪಥದ ರಸ್ತೆ ನಿರ್ಮಾಣವಾಗಲಿದೆ. ರಸ್ತೆ ನಿರ್ಮಾಣಕ್ಕೆ 800 ಕೋಟಿ ಮತ್ತು ಭೂ ಸ್ವಾಧೀನ, ಡಿಪಿಆರ್ ತಯಾರಿಕೆ ಸೇರಿದಂತೆ ಇತರ ಕಾರ್ಯಗಳಿಗೆ 400 ಕೋಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಹುಬ್ಬಳ್ಳಿ-ಧಾರವಾಡ ರಸ್ತೆ ಬೈಪಾಸ್ ಅಗಲೀಕರಣಕ್ಕೆ ಬಹಳ ವರ್ಷಗಳಿಂದ ಬೇಡಿಕೆ ಇತ್ತು. ಬೆಂಗಳೂರು-ಪುಣೆ ನಡುವೆ 6 ಪಥದ ರಸ್ತೆಯಲ್ಲಿ ವೇಗವಾಗಿ ಬರುವ ವಾಹನಗಳು ಬೈಪಾಸ್‌ನಲ್ಲಿಯೂ ಅದೇ ವೇಗದಲ್ಲಿ ಬರುವುದರಿಂದ ಅಪಘಾತಗಳು ಸಂಭವಿಸುತ್ತಿದ್ದವು. ಈ ರಸ್ತೆ ಸಾವಿನ ರಸ್ತೆ ಎಂದೇ ಖ್ಯಾತಿ ಪಡೆದಿತ್ತು.
ಈ ಬೈಪಾಸ್ ರಸ್ತೆಯಲ್ಲಿ ಅಪಘಾತಗಳು ಸಾಮಾನ್ಯವಾಗಿದ್ದವು. 2021ರ ಜನವರಿ 15ರ ಶುಕ್ರವಾರ ಇದೇ ರಸ್ತೆಯ ಇಟಿಗಟ್ಟಿ ಬಳಿ ಟೆಂಪೋ ಟ್ರಾವೆಲರ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು. 11 ಮಹಿಳೆಯರು ಸೇರಿ 13 ಜನರು ಸಾವನ್ನಪ್ಪಿದ್ದರು.
ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬೈಪಾಸ್ ರಸ್ತೆ ಅಗಲೀಕರಣಕ್ಕೆ ಆಸಕ್ತಿ ತೋರಿಸಿದ್ದರು. ಸಚಿವ ನಿತಿನ್ ಗಡ್ಕರಿ ಜೊತೆ ಮಾತುಕತೆ ನಡೆಸಿ ಅನುದಾನ ತಂದಿದ್ದಾರೆ. ರಸ್ತೆ ನಿರ್ಮಾಣಕ್ಕೆ ಸೋಮವಾರ ಚಾಲನೆ ಸಿಗುತ್ತಿದೆ.