ಕಲಬುರಗಿ: ನಗರದಲ್ಲಿ ನಿರಂತರವಾಗಿ ಬೈಕ್ ಕಳ್ಳತನದಲ್ಲಿ ತೊಡಗಿದ್ದ ಅಪ್ರಾಪ್ತ ಬಾಲಕನೊಬ್ಬನನ್ನು ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದು, 4 ಲಕ್ಷ ರೂ. ಮೌಲ್ಯದ 10 ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ.
ಇಲ್ಲಿನ ಶಿವಶಕ್ತಿ ನಗರದ ನಿವಾಸಿ, 17 ವರ್ಷದ ಬಾಲಕನೇ ಸೆರೆಯಾದವ.
ಈತ ನಗರದ ವಿವಿಧೆಡೆಗಳಲ್ಲಿ ನಿಲ್ಲಿಸಿದ್ದ ಬೈಕ್‌ಗಳ ಕಳ್ಳತನದಲ್ಲಿ ತೊಡಗಿದ್ದ. ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಗಿರೀಶ ಎಸ್.ಬಿ. ನೇತೃತ್ವದಲ್ಲಿ ಸ್ಟೇಷನ್ ಬಜಾರ್ ಠಾಣೆ ಇನ್‌ಸ್ಪೆಕ್ಟರ್ ಸಿದ್ದರಾಮೇಶ್ವರ ಗಡೇದ ಮತ್ತು ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ಬೈಕ್‌ಗಳ ಕಳವು ಅಧಿಕವಾಗಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಡಾ| ವೈ.ಎಸ್.ರವಿಕುಮಾರ, ಉಪ ಪೊಲೀಸ್ ಆಯುಕ್ತರಾದ ಅಡ್ಮೂರ ಶ್ರೀನಿವಾಸಲು ಮತ್ತು ಶ್ರೀಕಾಂತ ಕಟ್ಟಿಮನಿ ಮಾರ್ಗದರ್ಶನದಲ್ಲಿ ಎಸಿಪಿ ಗಿರೀಶ ಎಸ್.ಬಿ. ನೇತೃತ್ವದಲ್ಲಿ ಕಳ್ಳರ ವಿಶೇಷ ತಂಡ ರಚನೆ ಮಾಡಲಾಗಿದೆ. ಆರೋಪಿಯನ್ನು ಈ ಹಿಂದೆಯೇ ಬ್ರಹ್ಮಪುರ ಠಾಣೆ ಪೊಲೀಸರು ಬಂಧಿಸಿ, ಬಾಲ ಮಂದಿರಕ್ಕೆ ಕಳುಹಿಸಿದ್ದರು. ಆದರೆ, ಅಲ್ಲಿಂದ ಈತ ಪರಾರಿಯಾಗಿದ್ದ. ಬಳಿಕ ಎಂ.ಬಿ.ನಗರ ಠಾಣೆಯ ಬಂಧಿಸಿದ್ದರು. ಕಳೆದ ಡಿ.17ರಂದು ಶಿಕ್ಷೆ ಮುಗಿಸಿ ಬಿಡುಗಡೆಯಾಗಿದ್ದ. ಆದರೂ, ಈತ ಬೈಕ್ ಕಳ್ಳತನ ಬಿಟ್ಟಿರಲಿಲ್ಲ. ಕಳೆದ ಎರಡು ತಿಂಗಳಲ್ಲೇ 10 ಬೈಕ್ ಕಳವು ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ವಾಹನಗಳ ತಪಾಸಣೆ ವೇಳೆ ಬಾಲ ಕಳ್ಳ ಸಿಕ್ಕಿ ಬಿದ್ದಿದ್ದಾನೆ. ಎಎಸ್‌ಐ ನಜ್ಜುಮೋದ್ದಿನ್ ಮತ್ತು ಪೊಲೀಸ್ ಸಿಬ್ಬಂದಿ ಬಸವರಾಜ ಗೋಣಿ, ಜಯಭೀಮ, ಮಲ್ಲಿಕಾರ್ಜುನ, ಶಿವಾನಂದ, ಬೊಗೇಶ, ಮೋಶಿನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪೊಲೀಸ್ ತಂಡದ ಕಾರ್ಯಕ್ಕೆ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.