ಚಾಮರಾಜನಗರ: ರಾಜ್ಯ ಹೈಕೋರ್ಟ್ ಹಿಜಾಬ್ ಧರಿಸುವಿಕೆ ಬಗ್ಗೆ ತನ್ನ ತೀರ್ಪು ಪ್ರಕಟಗೊಳಿಸುವವರೆಗೆ ನಮಗೆ ಹಿಜಾಬ್ ಧರಿಸಿಯೇ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಬೇಕು. ಇಲ್ಲವಾದಲ್ಲಿ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಪಿಯುಸಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರು ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿನಿಯರಾದ ಹೀನಾ, ಖುತೇಜಾ, ಅಮೀನಾ, ಬೀಬಿ ಫಾತೀಮಾ ಹಾಗೂ ಶಿಫಾ, ನಾವು ಹಿಂದಿನಿಂದಲೂ ಕಾಲೇಜುವರೆಗೆ ಬುರ್ಖಾ ಧರಿಸಿ ಬಳಿಕ ಬುರ್ಖಾ ತೆಗೆದು ಹಿಜಾಬ್ ಧರಿಸಿ ತರಗತಿಗಳಿಗೆ ಹೋಗಿ ಪಾಠ ಕೇಳುತ್ತಿದ್ದೆವು. ಫೆ. 16ರವರೆಗೂ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಫೆ. 16ರ ಬಳಿಕ ನಮಗೆ ಹಿಜಾಬ್ ಧರಿಸಿ ತರಗತಿ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ಹಿಜಾಬ್ ತೆರೆದು ಬಂದರಷ್ಟೇ ತರಗತಿಗೆ ಬನ್ನಿ, ಇಲ್ಲವಾದರೆ ಪ್ರವೇಶವಿಲ್ಲ ಎಂದು ಪ್ರಾಂಶುಪಾಲರು ಹೇಳುತ್ತಿದ್ದಾರೆ ಎಂದರು.
ನಾವು ಅಂದಿನಿಂದಲೂ ಕಾಲೇಜಿಗೆ ತೆರಳಿದರೂ ತರಗತಿಯೊಳಗೆ ಅವಕಾಶ ನೀಡುತ್ತಿಲ್ಲ. ಇದರಿಂದ ನಮಗೆ ಹಾಜರಾತಿ, ಪಾಠ ತಪ್ಪಿ ಹೋಗುತ್ತಿದೆ. ಹಿಜಾಬ್ ನಮ್ಮ ಧರ್ಮದ ಸಂಸ್ಕೃತಿ. ಅದನ್ನು ನಾವು ಏಕಾಏಕಿ ಬಿಡುವುದು ಸಾಧ್ಯವಿಲ್ಲ ಎಂದರು.