ಧಾರವಾಡ: ಬೆಳಗಾವಿಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಗಲಾಟೆ ವಿಚಾರವಾಗಿ ಸರ್ಕಾರದ ಮಧ್ಯ ಪ್ರವೇಶಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆಗ್ರಹ ಪಡಿಸಿದರು.
ಬೆಳಗಾವಿಯ ಪೀರನವಾಡಿಯಲ್ಲಿ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಈ ಬಗ್ಗೆ ನಗರದಲ್ಲಿ ಮಾತನಾಡಿದ ಅವರು, ಇದು ಬಹಳ ದುರದೃಷ್ಟಕರ ವಿಚಾರ. ಸಂಗೊಳ್ಳಿ ರಾಯಣ್ಣನ ತ್ಯಾಗ, ಬಲಿದಾನ ದೊಡ್ಡದು. ಅಂತಹ ವೀರ ಒಂದು ಕಡೆ, ಈ ದೇಶ ಒಗ್ಗಟ್ಟಾಗಿ ಕಟ್ಟಿದ ಶಿವಾಜಿ ಮಹಾರಾಜರು ಇನ್ನೊಂದು ಕಡೆ. ಇವರಿಬ್ಬರು ದೇಶದ ಹೆಮ್ಮೆ, ವಿಶ್ವಮಾನವರು, ಇಂಥವರ ವಿಷಯದಲ್ಲಿ ಪುತ್ಥಳಿ ರಾಜಕಾರಣ ಆಗಬಾರದು ಎಂದು ಹೇಳಿದರು.
ನೀರು, ಪುತ್ಥಳಿ ಹಾಗೂ ಮಂದಿರ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಮಾಡಿದರೆ ನಮ್ಮಂತ ಶಾಸಕರು ಅನರ್ಹ ಆಗಬೇಕು ಎಂದು ಶಾಸಕಿ ಲಕ್ಷ್ಮಿ ಹೇಳಿದರು.
ನಮ್ಮ ದೇಶಕ್ಕೆ ಇಬ್ಬರೂ ವೀರಪುತ್ರರು. ಇವರಿಗೆ ಸಂಬಂಧಿಸಿದವರು ಶಾಂತ ರೀತಿಯಿಂದ ಕುಳಿತು ಬಗೆಹರಿಸಬೇಕು. ನಾನು ಎಂಇಎಸ್ ಬಗ್ಗೆ ಯಾವಾಗಲೂ ವಿರೋಧಿಸುತ್ತ ಬಂದಿದ್ದೇನೆ. ಎಂಇಎಸ್‍ನ ಈ ಕೃತ್ಯಗಳನ್ನು ಖಂಡಿಸುತ್ತೇವೆ ಎಂದರು.