ಶಿವಮೊಗ್ಗ: ಜಿಲ್ಲೆಯಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ (Harsha Murder) ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಒಟ್ಟು 10 ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಬಿಎಂ ಲಕ್ಷ್ಮೀಪ್ರಸಾದ್, ಹರ್ಷ ಮೊಬೈಲ್ ಫೋನ್ (Mobile Phone) ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ. ಹರ್ಷ ಮೊಬೈಲ್ಗೆ ಯುವತಿಯರು ವಿಡಿಯೋ ಕಾಲ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಎಸ್ಪಿ, ಹತ್ಯೆಯಾದ ಹರ್ಷನ ಸ್ನೇಹಿತನ ಹೇಳಿಕೆಯನ್ನು ಪಡೆಯಲಾಗಿದೆ. ಯುವತಿಯರು ಯಾರು ಎನ್ನುವ ತನಿಖೆ ಮಾಡಲಾಗುತ್ತದೆ ಎಂದಿದ್ದಾರೆ.
ಕೃತ್ಯಕ್ಕೆ ಒಂದು ಕಾರು ಬಳಕೆ:
ಈಗಾಗಲೇ ಪ್ರಕರಣದಲ್ಲಿ 2 ಕಾರು, ಒಂದು ಬೈಕ್ ಸೀಜ್ ಮಾಡಲಾಗಿದೆ. ಆದರೆ ಕೃತ್ಯಕ್ಕೆ ಬಳಸಿರುವುದು ಒಂದೇ ಕಾರು ಎಂಬುದು ದೃಢವಾಗಿದೆ. ಇಂದಿನ ಪರಿಸ್ಥಿತಿ ಅವಲೋಕಿಸಿ ಕರ್ಫ್ಯೂ ವಿಸ್ತರಣೆ ಬಗ್ಗೆ ನಿರ್ಧಾರ ಮಾಡಲಾಗುವುದು. ಹರ್ಷನ ಕೊಲೆಗೆ ಹಣ ವರ್ಗಾವಣೆ, ರೌಡಿಗಳ ಪಾತ್ರ ಸೇರಿದಂತೆ ಎಲ್ಲ ಆಯಾಮಗಳಲ್ಲೂ ತನಿಖೆ ಮಾಡಲಾಗುತ್ತಿದೆ ಅಂತ ಎಸ್ಪಿ ಬಿಎಂ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.
ನಿನ್ನೆ ಅಬ್ದುಲ್ ರೋಶನ್ ಮತ್ತು ಜಾಫರ್ ಸಾಧೀಕ್ನ ಬಂಧಿಸಲಾಗಿದೆ. ಅಬ್ದುಲ್ ರೋಶನ ಕೃತ್ಯಕ್ಕೆ ಸಹಾಯ ಮಾಡಿದ್ದಾನೆ. ಜಾಫರ್ ಸಾದೀಕ್ ಆರೋಪಿ ಫರಾಜ್ ತಂದೆ. ತಂದೆ ಮಗ ಫರಾಜ್ ತಪ್ಪಿಸಿ ಕೊಂಡು ಹೋಗಲು ಸಹಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತಂದೆ ಜಾಫರ್ ಸಾದೀಕ್ ಬಂಧನ ಆಗಿದೆ. ನಿನ್ನೆ ಕೃತ್ಯಕ್ಕೆ ಬಳಸಿದ ಕಾರ್ ಸೀಜ್ ಆಗಿದೆ. ಕೃತ್ಯಕ್ಕೆ ಬಳಸಿದ ಕಾರು ಯಾರದ್ದು? ಅದರ ಮಾಲೀಕ ಯಾರು? ಎನ್ನುವ ಕುರಿತು ಪತ್ತೆ ಮಾಡಲಾಗುತ್ತಿದೆ. ಹೊರ ರಾಜ್ಯದಿಂದ ಬಂತಾ? ಅದನ್ನು ವ್ಯಾಪಾರ ಮಾಡಿದ್ದು ಯಾರು? ಎನ್ನುವ ಕುರಿತು ತನಿಖೆ ನಡೆಯುತ್ತಿದೆ ಅಂತ ಲಕ್ಷ್ಮೀಪ್ರಸಾದ್ ಹೇಳಿದ್ದಾರೆ