ಕಲಬುರಗಿ: ತನ್ನ ಮೇಲಾಧಿಕಾರಿಗಳ ವರ್ತನೆಯಿಂದ ಮನನೊಂದು ಸಿಬ್ಬಂದಿಯೊಬ್ಬ ಡೆತ್ ನೋಟ್ ಬರೆದಿಟ್ಟು, ಲೈವ್ ವೀಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಿನಾರಾ ಕ್ಯಾಪಿಟಲ್‍ನ ಕಲಬುರಗಿ ಶಾಖೆಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಕೃಷ್ಣಕಾಂತ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದ್ದು, ನಗರದ ಕೆಬಿಎನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಏನಿದು ಘಟನೆ?
ಕೃಷ್ಣಕಾಂತ್ ಆತ್ಮಹತ್ಯೆ ಯತ್ನಕ್ಕೂ ಮುನ್ನ ಕಚೇರಿಯಲ್ಲಿಯೇ ಡೆತ್ ನೋಟ್ ಬರೆದಿಟ್ಟು ಬಳಿಕ ಲೈವ್ ವೀಡಿಯೋ ಮಾಡಿದ್ದಾರೆ. ಈ ವೇಳೆ ತಮ್ಮ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ.
ವೀಡಿಯೋದಲ್ಲಿ, ನಾನು ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಸಮರ್ಥವಾಗಿ ಕೆಲಸ ಮಾಡಿದರೂ, ಅನಗತ್ಯವಾಗಿ ಕಲಬುರಗಿಯಿಂದ ವಿಜಯಪುರಕ್ಕೆ ವರ್ಗಾವಣೆ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ರೆ ಅಪಹಾಸ್ಯ ಮಾಡಿ ಅವ್ಯಾಚ ಶಬ್ದಗಳಿಂದ ನಿಂದಿಸಿ ಮಾನಸಿಕವಾಗಿ ತೊಂದರೆ ಕೊಟ್ಟಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಈ ವಿಷಯವಾಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮಕೈಗೊಳ್ಳುವ ಬದಲಾಗಿ ಯಾವುದೇ ನೋಟಿಸ್ ನೀಡದೆ ನನ್ನನ್ನು ಕೆಲಸದಿಂದ ತೆಗೆದುಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವೇಳೆ ತನ್ನ ಆತ್ಮಹತ್ಯೆಗೆ ಕಿನಾರಾ ಕ್ಯಾಪಿಟಲ್‍ನ ಐದು ಜನ ಅಧಿಕಾರಿಗಳ ಹೆಸರು ಪ್ರಸ್ತಾಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.