ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ವಕೀಲ ಕೆ ಎನ್ ಜಗದೀಶ್ ಕುಮಾರ್ ಅಲಿಯಾಸ್ ಜಗದೀಶ್ ಮಹದೇವ್ ಅವರು ಸಮಾಜದಲ್ಲಿನ ಭ್ರಷ್ಟಚಾರ ಆರೋಪಗಳನ್ನು ಹೊತ್ತಿರುವವ ವಿರುದ್ಧ ಹೋರಾಟ ಮಾಡುತ್ತಿದ್ದಾರೆ.
ಜಗದೀಶ್ ಅವರನ್ನು ಬಂಧನದಲ್ಲಿ ಇಡುವುದರಿಂದ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗುತ್ತದೆ. ಹೀಗಾಗಿ ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಮಂಗಳವಾರ ಜಗದೀಶ್ ಪರ ವಕೀಲರು ಬೆಂಗಳೂರು ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಜಗದೀಶ್ ಅವರಿಗೆ ಜಾಮೀನು ಹಾಗೂ ಉಳಿದ ಆರೋಪಿಗಳಾದ ಶರತ್ ಖದ್ರಿ, ಪ್ರಶಾಂತಿ ಸುಭಾಷ್ ಮತ್ತು ಜಗದೀಶ್ ಪುತ್ರ ಆರ್ಯಗೌಡ ಅವರಿಗೆ ನಿರೀಕ್ಷಣಾ ಜಾಮೀನು ಕೋರಿ ವಕೀಲ ಹರೀಶ್ ಪ್ರಭು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು 68ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಕಾಶಿಂ ಚೂರಿಖಾನ್ ಅವರ ನೇತೃತ್ವದ ಪೀಠವು ವಿಚಾರಣೆ ನಡೆಸಿತು.
ವಕೀಲರು ಪ್ರಜಾಪ್ರಭುತ್ವದ ರಕ್ಷಕರಾಗಿದ್ದು, ಜಗದೀಶ್ ಅವರನ್ನು ಜೈಲಿನಲ್ಲಿ ಇಟ್ಟರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಐಪಿಎಸ್ ಅಧಿಕಾರಿಯೊಬ್ಬರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಹೋದಾಗ ಪುತ್ರ ಆರ್ಯಗೌಡನ ಮೇಲಿನ ದಾಳಿಯನ್ನು ಸಹಿಸದೇ ನೋವಿನಿಂದ ತಂದೆಯಾಗಿ ಆಕ್ಷೇಪಾರ್ಹವಾದ ಕೆಲವು ಮಾತುಗಳನ್ನು ಜಗದೀಶ್ ಆಡಿದ್ದಾರೆಯೇ ವಿನಾ ವಕೀಲನಾಗಿ ಹೇಳಿದ ಮಾತುಗಳು ಅವಾಗಿರಲಿಲ್ಲ ಎಂದು ಪೀಠಕ್ಕೆ ಮನವರಿಕೆ ಮಾಡಲು ಜಗದೀಶ್ ಪರ ವಕೀಲರು ಯತ್ನಿಸಿದರು.