ಪೊಲೀಸ್ ಠಾಣೆ ಅಂದ ಮೇಲೆ ಅಲ್ಲಿ ಹಲವಾರು ರೀತಿಯ ಕೇಸ್‍ಗಳು ಬರುವುದು ಸಾಮಾನ್ಯ. ಕಳ್ಳತನ,ದರೋಡೆ, ಮಿಸ್ಸಿಂಗ್, ಕೊಲೆ ಹೀಗೆ ಅನೇಕ ರೀತಿಯ ಕೇಸ್‍ಗಳು ಸರ್ವೇ ಸಾಮಾನ್ಯ. ಆದರೆ ಇಲ್ಲೊಬ್ಬ ವಯೋವೃದ್ಧೆ ತಾನು ಕಳೆದುಕೊಂಡದನ್ನು ಹುಡುಕಿಕೊಡಿ ಎಂದು ಈಗ ಪೊಲೀಸ್ ಅಧೀಕ್ಷಕರ ಕಛೇರಿಯ ಮೆಟ್ಟಿಲೇರಿದ್ದಾಳೆ. ಅಷ್ಟಕ್ಕೂ ಅವಳು ಕಳೆದುಕೊಂಡಿದ್ದಾದರೂ ಏನು ಎಂತೀರಾ ಸ್ಟೋರಿ ನೋಡಿ…
ಒಂದೆಡೆ ಕಿತ್ತು ತಿನ್ನುವ ಬಡತನ, ಇನ್ನೊಂಡೆದೆ ದುಡಿಯಲು ಶಕ್ತಿಯಿಲ್ಲದೇ ಸಮಾಜದ ಕಣ್ಣಲ್ಲಿ ಹೀನವಾಗಿ ಕಾಣುವ ಪರೀಸ್ಥಿತಿ, ಕಳೆದುಕೊಂಡಿದ್ದನ್ನು ಹುಡುಕಲು ಕಾಲಲ್ಲ ಶಕ್ತಿಯಿಲ್ಲದ ಮುಪ್ಪಿನ ಕಾಲ, ಬೆಲೆಬಾಳೋದನ್ನೆ ಕಳೆದುಕೊಂಡಿದ್ದೇನೆ ಹುಡುಕಿಕೊಡಿ ಎಂದು ಕಂಡ ಕಂಡವರಿಗೆಲ್ಲ ಕೈಮುಗಿದು ನಡೆದು ಬರುತ್ತಿರುವ ಈ ವಯೋವೃದ್ಧೆಯ ಜೀವನದ ದಯನೀಯ ಸ್ಥಿತಿ ಇದು.
ಅಷ್ಟಕ್ಕೂ ಈ ವೃದ್ಧೆ ಯಾರು ಅಂತೀರಾ… ಈ ವೃದ್ಧೆಯ ಹೆಸರು ಬಸವಣ್ಣೆವ್ವ ಗುರುಪಾದಪ್ಪ ಕೋರಿಶೆಟ್ಟಿ ಅಂತಾ. ಇವರು ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಖಾನಪೇಟ್‍ದವರು. ಅಷ್ಟಕ್ಕೂ ಅವರು ಹುಡುಕುತ್ತಿರುವುದು ಬದುಕಿಗೆ ಮೂಲಾಧಾರವಾಗಿದ್ದ ಅವರ ಚಿಕ್ಕ ಮಗ ಶಿಂಗಪ್ಪ ಕೋರಿಶೆಟ್ಟಿಯನ್ನು. 80ವರ್ಷ ವಯಸ್ಸಾಗಿರುವ ಇವರಿಗೆ ಇವರ ಚಿಕ್ಕ ಮಗ 18 ವರ್ಷದ ಹಿಂದೆ 2ಎಕರೆ ಹೊಲವನ್ನು ಮಾರಿ 2ಲಕ್ಷ 50ಸಾವಿರ ರೂಪಾಯಿಗಳನ್ನು ತಾಯಿಯ ಹೆಸರಲ್ಲಿ ಇಡುವುದಾಗಿ ಹೇಳಿ ವಂಚಿಸಿ ಕಣ್ಮರೆಯಾದವ ಇನ್ನೂ ತಿರುಗಿ ಬಂದಿಲ್ಲ. ಈಗಾಗಲೇ ಹಲವಾರು ಬಾರಿ ಸಾಲ ಸೋಲ ಮಾಡಿಕೊಂಡು ವೃದ್ಧೆ ಮಗನನ್ನು ಹುಡುಕಿಕೊಂಡು ಬೆಂಗಳೂರಿಗೆ ಅಲೆದು ಬೇಸತ್ತಿದ್ದಾಳೆ. ಆದರೆ ಕಳೆದ 15 ದಿನಗಳ ಹಿಂದೆ ಅವನನ್ನು ಊರಲ್ಲಿ ನೋಡೊದ ವೃದ್ಧೆಗೆ ತನ್ನ ಮಗ ಬದುಕಿದ್ದಾನೆ ಎಂದು ಗೊತ್ತಾಗಿದೆ. ಹಾಗಾಗಿ ನನ್ನ ಮಗನನ್ನು ಹುಡುಕಿಕೊಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.