ಟೀಕೆ,ಟಿಪ್ಪಣಿಯನ್ನು ಕ್ರೀಡಾಮನೋಭಾವನೆಯಿಂದ ಸ್ವೀಕರಿಸುತ್ತಿದ್ದಸಿದ್ದನಗೌಡರು ಉದ್ಯೋಗ ಮಾಡಿಕೊಂಡೇ
ಕನ್ನಡ ಹೋರಾಟದಲ್ಲಿ ತೊಡಗಬೇಕೆಂದುಕಟ್ಟು ನಿಟ್ಟಾಗಿಯೇ ಹೇಳುತ್ತಿದ್ದರು!
ಬಹುಶಃ ನಾನು ಮತ್ತು ಹಿರಿಯ ಕನ್ನಡ ಹೋರಾಟಗಾರ,ಹಿರಿಯ ಪತ್ರಕರ್ತ ಶ್ರೀ ರಾಘವೇಂದ್ರ ಜೋಶಿಯವರು ಮಾಜಿ ಮಹಾಪೌರ ದಿ.ಸಿದ್ದನಗೌಡ ಪಾಟೀಲರ ವಿರುದ್ಧ ಬರೆದಷ್ಟು,ಜಗಳಾಡಿದಷ್ಟು ಬೇರೆ ಯಾರೂ ಜಗಳಾಡಿರಲಿಕ್ಕಿಲ್ಲ!!
1980 ರಲ್ಲಿ ನಾನು ರಾಮದುರ್ಗದಿಂದ ಬೆಳಗಾವಿಗೆ ಬಂದು ಪತ್ರಿಕೋದ್ಯಮ ಪ್ರವೇಶಿಸಿದಾಗ ಗೌಡರು ಕನ್ನಡ ಹೋರಾಟಗಾರರ ಅಗ್ರಗಣ್ಯ ನಾಯಕರು.1982 ರಲ್ಲಿ ಪತ್ರಕರ್ತರಾಗಿದ್ದುಕೊಂಡೇ ಐತಿಹಾಸಿಕ ಗೋಕಾಕ ಚಳವಳಿಯ ಮೂಲಕ ಕನ್ನಡ ಹೋರಾಟದಲ್ಲಿ ಗುರುತಿಸಿಕೊಂಡ ನನ್ನಂಥ ಯುವಕರಿಗೆ ಗೌಡರ ಪರಿಚಯ ಅದೇ ತಾನೆ ಆಗತೊಡಗಿತ್ತು.ಜೋಶಿಯವರ ಜೊತೆಗೆ ದಿ.ಹರಿ ದೇಶಪಾಂಡೆ,ಅಣ್ಣಾಸಾಹೇಬ ಮಂಡಗಿ,ಶಂಕರ ಬುಚಡಿ ಮುಂತಾದವರು ಇದ್ದೇ ಇರುತ್ತಿದ್ದರು.1984 ರಲ್ಲಿ ಬೆಳಗಾವಿ ನಗರಸಭೆಯು ಮಹಾನಗರ ಪಾಲಿಕೆಯಾಗಿ ಪರಿವರ್ತನೆಯಾಗಿ ಚುನಾವಣೆ ನಡೆದಾಗ ಸಿದ್ದನಗೌಡರು ಪಾಲಿಕೆಗೆ ಆಯ್ಕೆಗೊಂಡರು.
1990 ರಲ್ಲಿ ಪುನರಾಯ್ಕೆಗೊಂಡ ಗೌಡರು 1991 ರಲ್ಲಿ ಮುಖ್ಯಮಂತ್ರಿ ಬಂಗಾರೆಪ್ಪ ಅವರ ರಾಜಕೀಯ ತಂತ್ರಗಾರಿಕೆಯ ಫಲವಾಗಿ ,ಎಮ್.ಇ.ಎಸ್.ನಾಯಕ ಸಂಭಾಜಿ ಪಾಟೀಲರ ಆರು ಸದಸ್ಯರ ಗುಂಪಿನ ಬೆಂಬಲ ಪಡೆದು,ಪ್ರಪ್ರಥಮ ಕನ್ನಡ ಮಹಾಪೌರರಾಗಿ ಆಯ್ಕೆಗೊಂಡರು.ಬೆಳಗಾವಿಯ ಇತಿಹಾಸದಲ್ಲಿ ಒಂದು ದಾಖಲೆ ಸ್ಥಾಪಿಸಿದರು.ಉಪಮಹಾಪೌರರಾಗಿ ನಿಸ್ಸಾರ ಅಹ್ಮದ ಸನದಿ ಆಯ್ಕೆಯಾದರು.
ಪಾಲಿಕೆಯ ಅಧಿಕೃತ ಅಂಬಾಸ್ಸಡರ್ ಕಾರಿನ ಮೇಲೆ ಕನ್ನಡ ಧ್ವಜ ಹಾಕಬೇಕೆಂಬ ನಮ್ಮ ಬೇಡಿಕೆಗೆ ಮಹಾಪೌರ ಗೌಡರು ಒಪ್ಪದಿದ್ದಾಗ ನಿಸ್ಸಾರ ಸನದಿಯವರ ಕೈಯಿಂದ ನಾನು ಕಾರಿನ ಮೇಲೆ ಕನ್ನಡ ಧ್ವಜ ಹಚ್ಚಿಸಿದೆ.ಇದು ರಾಜ್ಯದಲ್ಲಿಯೇ ಮಿಂಚಿನ ಸಂಚಾರವನ್ನುಂಟು ಮಾಡಿತು.ನಿಸ್ಸಾರ ಅಹ್ಮದ ಕನ್ನಡದ ಹೀರೊ ಎನಿಸಿಬಿಟ್ಟರು.ಗೌಡರ ವಿರುದ್ಧ ರಾಜ್ಯಾದ್ಯಂತ ಭಾರೀ ಟೀಕೆ,ಟಿಪ್ಪಣಿಗಳ ಮಹಾಪೂರವೇ ಹರಿಯಿತು.
ರಾಘವೇಂದ್ರ ಜೋಶಿಯವರ ಲೇಖನಿಯಂತೂ ನನಗಿಂತ ಹರಿತವಾಗಿತ್ತು.ಗೌಡರ ವಿರುದ್ಧ ಆಗಾಗ ಪುಟಗಟ್ಟಲೇ ಬರೆಯುವ ಅವಕಾಶವನ್ನು ತಪ್ಪಿಸಿಕೊಳ್ಖುತ್ತಿರಲಿಲ್ಲ!ಆದರೆ ಗೌಡರು ಏನೂ ಆಗಿಯೇ ಇಲ್ಲವೆಂಬಂತೆ ಸುಮ್ಮನಿದ್ದು ಬಿಡುತ್ತಿದ್ದರು! ತಮ್ಮ ರಾಜಕೀಯ ತಂತ್ರಗಳನ್ನು ಮುಂದುವರೆಸುತ್ತಿದ್ದರು!
ಏನೆಲ್ಲ ಟೀಕೆ ಬರಲಿ.ಯಾರೇ ಬಯ್ಯಲಿ.ಗೌಡರು ಕ್ರೀಡಾ ಮನೋಭಾವನೆಯಿಂದಲೇ ತೆಗೆದುಕೊಳ್ಳುತ್ತಿದ್ದರು.ಮತ್ತೆ ಕರೆಯುತ್ತಿದ್ದರು.ಫೋನ್ ಮಾಡುತ್ತಿದ್ದರು.ಹೋರಾಟದ ಬಗ್ಗೆ ಚರ್ಚಿಸುತ್ತಿದ್ದರು.
ಮೊದಲು ಉಪಜೀವನ,ನಂತರ
ಕನ್ನಡ ಹೋರಾಟ!
ಗೌಡರ ಉದ್ಯೋಗ 1956 ರಿಂದಲೂ ಮುದ್ರಣ ವ್ಯವಸಾಯ.ಬೆಳಗಾವಿಯ ಅನಂತಶಯನ ಬೀದಿಯಲ್ಲಿ ಅವರದೊಂದು ಹಳೆಯ ಮಾದರಿಯ ಸಿ.ಎನ್.ಪಾಟೀಲ
ಪ್ರಿಂಟಿಂಗ್ ಪ್ರೆಸ್.1988 ರಲ್ಲಿ ನಾನು ಪತ್ರಿಕಾ ರಂಗ ಬಿಟ್ಟು ಕೊತ್ವಾಲ ಬೀದಿಯಲ್ಲಿ
” ಚಂದರಗಿ ಪ್ರಿಂಟರ್ಸ” ಹಳೆಯ ಮಾದರಿಯ ಮೊಳೆ ಜೋಡಿಸುವ,ಟ್ರೆಡಲ್ ಪ್ರೆಸ್ ಹಾಕಿದೆ.1993 ರಲ್ಲಿ ಬಂಗಾರೆಪ್ಪ ಅವರ ಕರ್ನಾಟಕ ಕಾಂಗ್ರೆಸ್ ಪಕ್ಷ ಸೇರಿ ಉದ್ಯೋಗವನ್ನು ನಿರ್ಲಕ್ಷಿಸಿ ರಾಜಕೀಯ ಸೆಳೆತಕ್ಕೆ ಸಿಲುಕಿದಾಗ ಮೊದಲು ವಾರ್ನ ಮಾಡಿದವರೇ ಗೌಡರು.” ನೀವು ಉದ್ಯೋಗ ಬಿಟ್ಟು ಹೀಗೆ ರಾಜಕೀಯ ಮಾಡಿದರೆ ಉಪಜೀವನಕ್ಕೇನು
ಮಾಡುತ್ತೀರಿ? ಎಂದು ಗೌಡರು ನನ್ನನ್ನು ಕೇಳಿದ್ದರು.
ಗೌಡರು ಮಹಾಪೌರ ಹುದ್ದೆಯಲ್ಲಿದ್ದರೂ ಕಾರು ತೆಗೆದುಕೊಂಡು ಮುಂಜಾನೆ ಮೊದಲು ಹೋಗುತ್ತಿದ್ದುದು ತಮ್ಮ ಪ್ರಿಂಟಿಂಗ್ ಪ್ರೆಸ್ಸಿಗೆ.ಅಲ್ಲಿ ಪ್ರಿಂಟಿಂಗ್ ಮಾಡುತ್ತಿದ್ದ ಮಹಾದೇವನನ್ನು ಮಾತನಾಡಿಸಿ ಆ ದಿನದ ಕೆಲಸ ವಹಿಸಿದ ನಂತರವೇ ಪಾಲಿಕೆಯತ್ತ ಹೋಗುತ್ತಿದ್ದರು.
ಕಳೆದ ಮೂವತ್ತೆರಡು ವರ್ಷಗಳಲ್ಲಿ
ನಾನು ಪ್ರಿಂಟಿಂಗ್,ಲ್ಯಾಮಿನೇಶನ್,ಸರಕಾರಿ.ಇಲಾಖೆಗಳಲ್ಲಿಯ ಹಳೆಯ ದಾಖಲೆಗಳ ಸ್ಕ್ಯಾನಿಂಗ್,ಲ್ಯಾಮಿನೇಶನ್,ಲೆದರ್ ಬೈಂಡಿಂಗ್ ಮಾಡುವ ಉದ್ಯೋಗದಲ್ಲಿದ್ದೇನೆ.ಮೂರು ಜಿಲ್ಲೆಗಳಿಗೆ ಉದ್ಯೋಗವನ್ನು ವಿಸ್ತರಿಸಿದ್ದೇನೆ.ಇದು ಗೌಡರಿಗೆ ಚೆನ್ನಾಗಿ ಗೊತ್ತಿತ್ತು.ಕಳೆದ ಜುಲೈ ತಿಂಗಳಲ್ಲಿ ನನ್ನನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡುವ ಸಂಬಂಧ ಕನ್ನಡ ಸಂಘಟನೆಗಳು ಪ್ರಯತ್ನ ನಡೆಸುತ್ತಿದ್ದಾಗ ಗೌಡರು ಫೋನ್ ಮಾಡಿದರು.”
ನೀವು ಒಳ್ಳೆಯ ಬ್ಯುಜಿನೆಸ್ ಮಾಡ್ತೀರಿ.ಬರೀತಿರಿ.ತಲೆ ಐತಿ.ಮಂದಿ ಕೂಡಸ್ತೀರಿ.ಅನೇಕ ವಿಷಯಗಳ ಬಗ್ಗೆ ಅಭ್ಯಾಸ ಐತಿ.ನಿಮ್ಮಂಥವರು ಬೆಂಗಳೂರಿನಲ್ಲಿದ್ರೆ ಇನ್ನೂ ಚಲೊ ಅಕ್ಕೈತಿ.ನಿಮ್ಮ ಮಗ ಹೆಂಗೂ ಕೆ ಎ ಎಸ್ ಅಧಿಕಾರಿಯಾಗ್ಯಾನ.ಇದ ಬ್ಯುಜಿನೆಸ್ ನೀವು ಬೆಂಗಳೂರಿನಾಗೂ ಮಾಡಬಹುದು.ಅಲ್ಲಿದ್ರ ನೀವು ಲಗೂನ್ ಎಮ್.ಎಲ್.ಸಿ.ಆಗ್ತೀರಿ” ಎಂದರು! ನಾನು ಗೌಡರಿಗೆ ಎದುರುತ್ತರ ಕೊಡಲಿಲ್ಲ!
ಗೌಡರ ಮತ್ತು ನನ್ನ ಮಧ್ಯೆ ಅನೇಕ ಭಿನ್ನಾಭಿಪ್ರಾಯ ಇತ್ತು.ಅನೇಕ ಬಾರಿ ತಿಂಗಳುಗಳ ಕಾಲ ಮಾತು ಬಿಟ್ಟಿದ್ದಿದೆ.ಆದರೆ ಬೆಳಗಾವಿ ಡಿಸಿ ಆಫೀಸಿನಲ್ಲಿ ಆಗಾಗ ನಡೆಯುತ್ತಿದ್ದ ಸಭೆಗಳಲ್ಲಿ ಸೇರುತ್ತಿದ್ದೆವು.ನಾನು ಮೊದಲು ಹೋಗಿ ಮೊದಲ ಸಾಲಿನ ಮೊದಲ ಖುರ್ಚಿಯಲ್ಲಿ ನಾನು ಕುಳಿತಿದ್ದರೆ ಗೌಡರು ಬಂದಾಕ್ಷಣ ನಾನು ಸುಮ್ಮನೇ ಖುರ್ಚಿ ಖಾಲಿ ಮಾಡಿ ಬದಿಗೆ ಸರಿಯುವ ನಿಯತ್ತಿನಲ್ಲಿ ನಾನು ಎಂದಿಗೂ ತಪ್ಪುತ್ತಿರಲಿಲ್ಲ.
ಕೆಲವು ಸಲ ನಾನು ಮಾತು ಬಿಟ್ಟಾಗ ಗೌಡರು ಫೋನ್ ಮಾಡಿಯೇ ಮಾಡುತ್ತಿದ್ದರು.ಅವರನ್ನು ಬಿಟ್ಟು ನಾನು ಯಾವದೇ ಸಮಾರಂಭ,ಸಭೆ ಮಾಡುತ್ತಿರಲೂ ಇಲ್ಲ.ನಾನು ಕಳೆದ ಮಾರ್ಚ 23 ರಿಂದ ಜುಲೈ ಒಂದರವರೆಗೆ ನೂರು ದಿನಗಳ ಕಾಲ,ಕೊರೋನಾ ಬಿಕ್ಕಟ್ಟಿನ ಸಮಯದಲ್ಲಿ” ಹಸಿದವರತ್ತ ನಮ್ಮ ಚಿತ್ತ” ಅಭಿಯಾನ ನಡೆಸಿದೆ.ಮೂರ್ನಾಲ್ಕು ಸಾವಿರ ಕುಟುಂಬಗಳಿಗೆ ,ದಾನಿಗಳ ನೆರವಿನಿಂದ,ಆಹಾರ ಕಿಟ್ ಹಂಚಿದೆ.ಗೌಡರು ಫೋನ್ ಮಾಡಿ ಎರಡು ಕ್ವಿಂಟಾಲ್ ಅಕ್ಕಿ ಕೊಟ್ಟರು.ಇತರ ದಾನಿಗಳಿಗೂ ಫೋನ್ ಮಾಡಿ ಆಹಾರ ಧಾನ್ಯ ಕೊಡಿಸಿದರು.
ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಟೇಲರ್ ಸಮುದಾಯಕ್ಕೆ ಆಹಾರ ಧಾನ್ಯ ಹಂಚುವ ಕಾರ್ಯಕ್ರಮಕ್ಕೆ ಗೌಡರನ್ನು ಆಹ್ವಾನಿಸಿದೆ.ಬಂದರು.ನಾಲ್ಕು ಮಾತು ಹೇಳಿದರು.ಆದರೆ ಜುಲೈ ಒಂದರಂದು ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ನಡೆದ ಅಭಿಯಾನದ ಸಮಾರೋಪ
ಸಮಾರಂಭದ ಅಧ್ಯಕ್ಷತೆ ವಹಿಸಲು ಗೌಡರನ್ನು ಕರೆದೆ.ಆದರೆ ಅವರ ಆರೋಗ್ಯ ಕೈಕೊಟ್ಟಿತ್ತು.ಬರಲಿಲ್ಲ.
ನಮ್ಮ ಅಭಿಯಾನಕ್ಕೆ ನೆರವಾದವರಿಗೆ ಒಂದು ಶಾಲೂ,ಮೊಮೆಂಟೊ,ಧನ್ಯವಾದ ಪತ್ರವನ್ನು ಮನೆಗಳಿಗೇ ಕಳಿಸಿದೆ.ಗೌಡರಿಗೂ ಕಳಿಸಿದೆ.ಅವರಿಗೆ ಕೊಟ್ಟ ಅದೇ ಕೊನೆ ಶಾಲು ಮತ್ತು ಮೊಮೆಂಟೊ!
ಶಿವಬಸವನಗರದ ಅವರ ಮನೆಯ ಹಾದಿಗೆ ಹೋದಾಗ ಆವರಣದಲ್ಲೇ ಖುರ್ಚಿ ಹಾಕಿಕೊಂಡು ಕುಳಿತಿರುತ್ತಿದ್ದ ಗೌಡರನ್ನು ಐದು ನಿಮಿಷ ಮಾತನಾಡಿಸಿಯೇ ಬರುತ್ತಿದ್ದೆ.
ನಾಲ್ಕು ದಶಕಗಳ ಸಂಬಂಧ,ಪ್ರೀತಿ,ಜಗಳ ಎಲ್ಲವೂ ಇದ್ದ
ಗೌಡರು ನಿನ್ನೆ ಬುಧವಾರ ಅಗಷ್ಟ 26 ರಂದು ನಿಧನರಾದರು.ಅವರಿಗೆ ಅಂತಿಮ ನಮನ ಸಲ್ಲಿಸಿ ಮನೆಗೆ ಬಂದು ಸ್ನಾನ ಮಾಡಿ ಒಂದು ಕಪ್ ಚಹಾ ಕುಡಿದೆ.ಮಧ್ಯಾನ್ಹ ಊಟ ಮಾಡಲೂ ಮನಸ್ಸಾಗಲಿಲ್ಲ.ಏನೋ ಕಳೆದುಕೊಂಡಂತಾಗಿತ್ತು.
ರಾತ್ರಿ 9 ಗಂಟೆಗೆ ದಿಲ್ಲಿಯಿಂದ ಕೇಂದ್ರ ರೈಲು ಸಚಿವ ಶ್ರೀ ಸುರೇಶ ಅಂಗಡಿಯವರ ಫೋನ್ ಬಂತು.” ಸಿದ್ದನಗೌಡರ ನಿಧನದ ಶೋಕ ಸಂದೇಶ ನಿಮಗೇ ಹೇಳಬೇಕೆಂದು ಫೋನ್ ಮಾಡಿದೆ.ಅವರ ಅಗಲಿಕೆಯ ಶೋಕ ನಿಮಗಾದಷ್ಟು ಬೇರೆಯವರಿಗೆ ಆಗಿರಲಿಕ್ಕಿಲ್ಲ’ ಎಂದರು ಸುರೇಶ!
ಗೌಡರ ಬಗ್ಗೆ ಬರೆದಷ್ಟೂ ಕಡಿಮೆ.
(1991 ರಲ್ಲಿ ಬೆಳಗಾವಿಯ ಪಾಲಿಕೆಯ ಉಪಮಹಾಪೌರ ನಿಸ್ಸಾರ ಅಹ್ಮದ ಸನದಿ ಅವರು ತಮ್ಮ ಅಧಿಕೃತ ಕಾರಿನ ಮೇಲೆ ಕನ್ಬಡ ಧ್ವಜ ಹಾಕಿದ ಫೋಟೊ.ಇದರಲ್ಲಿ ನನ್ನ ಜೊತೆಗೆ ಬಾಸೂರು ತಿಪ್ಪೇಸ್ವಾಮಿ,ವಿನೋದ ಪಾಟೀಲ ಇದ್ದಾರೆ)
ಅಶೋಕ ಚಂದರಗಿ,ಅಧ್ಯಕ್ಷರು
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ
ಕ್ರಿಯಾ ಸಮಿತಿ,ಬೆಳಗಾವಿ.
ಮೊ: 9620114466
https://youtu.be/e7p7LycHBfI
*ಇದೇ ತಿಂಗಳು 29ರಂದು ಮತ್ತೆ ಅದೇ ಸ್ಥಳದಲ್ಲೇ ಪ್ರತಿಷ್ಠಾಪನೆ ಆಗತ್ತಾ ರಾಯಣ್ಣನ ಮೂರ್ತಿ…..*
*Like share and subscribe our channel for more updates*