ಬೆಂಗಳೂರು: ಸಿಲಿಕಾನ್ ಸಿಟಿಯ ಸಿಸಿಬಿ ಪೊಲೀಸರು ಮೊಟ್ಟಮೊದಲ ಬಾರಿಗೆ ಎರಡು ಕ್ವಿಂಟಾಲ್ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಏಕಕಾಲದಲ್ಲಿ 204 ಕೆಜಿ ಗಾಂಜಾ ಸಿಸಿಬಿ ಪೊಲೀಸರು ಬೇಟೆಯಾಡಿದ್ದು, ಈ ಮೂಲಕ ಇದೇ ಮೊದಲ ಬಾರಿಗೆ ಪೊಲೀಸ್ ಇತಿಹಾಸದಲ್ಲೇ ಇಷ್ಟು ಪ್ರಮಾಣದ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಗಾಂಜಾ ಬರೋಬ್ಬರಿ ಒಂದು ಕೋಟಿ ಬೆಲೆಬಾಳುತ್ತದೆ ಎಂದು ಅಂದಾಜಿಸಲಾಗಿದೆ.
ಜೊತೆಗೆ ಈ ಪ್ರಕರಣದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದು, ಅವರನ್ನು ಸಮೀರ್, ಕೈಸರ್ ಪಾಷಾ, ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಒಂದು ಲಾರಿ, ಒಂದು ಕಾರು, ಮೂರು ಮೊಬೈಲ್ ಸೇರಿದಂತೆ 204 ಕೆಜಿ ಗಾಂಜಾ ವಶ ಪಡೆಯಲಾಗಿದೆ. ಈ ಗ್ಯಾಂಗ್ ಸದಸ್ಯರು ರಾಜಾರೋಷವಾಗಿ ಲಾರಿಯಲ್ಲೇ ಗಾಂಜಾ ಸಾಗಾಟ ಮಾಡುತ್ತಿದ್ದರು. ಇದರ ಬಗ್ಗೆ ಖಚಿತ ಮಾಹಿತಿ ಪಡೆದ ಇನ್ಸ್‍ಪೆಕ್ಟರ್ ಬೊಳೆತ್ತಿನ್ ಹಾಗೂ ವಿರುಪಾಕ್ಷ ನೇತೃತ್ವದ ತಂಡ ದಾಳಿ ಮಾಡಿ ಅರೆಸ್ಟ್ ಮಾಡಿದೆ.
ಗಾಂಜಾ ಸಾಗಾಟದಲ್ಲಿ ರಾಜಕಾರಣಿಗಳ ಹೆಸರು ತಳುಕು ಹಾಕಿಕೊಂಡಿದ್ದು, ಬಂಧಿಸಿರುವ ಮೂವರಲ್ಲಿ ಕೈಸರ್ ಪಾಷಾ ಮೈಸೂರಿನ ಜೆಡಿಎಸ್ ಪಕ್ಷದ ಮುಖಂಡನಾಗಿದ್ದಾನೆ. ಈತನೇ ಈ ಗಾಂಜಾ ಗ್ಯಾಂಗಿನ ಕಿಂಗ್‍ಪಿನ್ ಎನ್ನಲಾಗಿದ್ದು, ಈತ ಮೈಸೂರಿನ ಶಾಂತಿನಗರ ನಗರಸಭೆ ವಾರ್ಡಿನಿಂದ ಕೌನ್ಸಲರ್ ಚುನಾವಣೆ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ. ಆದರೆ ಕೇವಲ 150 ಮತಗಳಿಂದ ಪರಾಜಿತ ಹೊಂದಿದ್ದ. ಈತ ಲಾರಿಯಲ್ಲಿ ಗಾಂಜಾವನ್ನು ವಿಶಾಖಪಟ್ಟಣದಿಂದ ದೇವನಹಳ್ಳಿಗೆ ಸಾಗಿಸುವಾಗ ಸಿಕ್ಕಿಬಿದ್ದಿದ್ದಾನೆ.