ಉಡುಪಿ: ಕೆಲವು ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ಉಡಪಿಯಲ್ಲಿ ಇನ್ನೂ ಮುಂದುವರಿದಿದ್ದು, ಇಲ್ಲಿನ ಕಾಲೇಜೊಂದರಲ್ಲಿ ಕೋರ್ಟ್ ಮಧ್ಯಂತರ ಆದೇಶದ ಹೊರತಾಗಿಯೂ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ಆಗಮಿಸಿದ್ದಾರೆ.
‘ಕೋರ್ಟ್ ಆದೇಶದ ಪ್ರಕಾರ ಮಕ್ಕಳಿಗೆ ಹಿಜಾಬ್ ಧರಿಸಲು ಅವಕಾಶ ಇರಲಿಲ್ಲ. ಇದನ್ನು ವಿದ್ಯಾರ್ಥಿನಿಗಳಿಗೆ ಮನವರಿಕೆ ಮಾಡಿದ್ದೇವೆ. ಕೋರ್ಟ್ ತೀರ್ಪು ಬರುವವರೆಗೆ ಕಾಯುತ್ತೇವೆಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ. ಒಟ್ಟು 2326 ವಿದ್ಯಾರ್ಥಿನಿಯರಿದ್ದು 196 ಮಂದಿ ಮುಸ್ಲಿಂರಿದ್ದಾರೆ. ಸದ್ಯ 40 ಮಂದಿ ಮಾತ್ರ ಹಿಜಾಬ್ ತೆಗೆಯಲು ಒಪ್ಪಿಲ್ಲ’ ಎಂದು ಪ್ರಾಂಶುಪಾಲರ ಭಾಸ್ಕರ ಶೆಟ್ಟಿ ಹೇಳಿದರು.
‘ಕಾಲೇಜು ಕ್ಯಾಂಪಸ್ ನಲ್ಲಿ ಹಿಜಾಬ್ ಹಾಕಿಕೊಂಡು ತಿರುಗಾಡಲು ಅವಕಾಶ ಕೊಟ್ಟಿದ್ದೇವೆ. ತರಗತಿ ಬಾರದ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಮಾಡುವ ತೀರ್ಮಾನ ತೆಗೆದುಕೊಳ್ಳುತ್ತೇವೆ. ಹೈಕೋರ್ಟ್ ಬಂದ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅಲ್ಲಿಯವರೆಗೆ ಯಥಾಸ್ಥಿತಿ ಕಾಪಾಡುತ್ತೇವೆ’ ಎಂದರು.
‘ಹಿಜಾಬ್ ನಮ್ಮ ಹೆಮ್ಮೆ. ನಾವು ಮೊದಲಿನಿಂದಲೂ ಹಿಜಾಬ್ ಹಾಕುತ್ತಿದ್ದೇವೆ. ಕೋರ್ಟ್ ಆದೇಶ ಬರುವವರೆಗೂ ಕಾಯುತ್ತೇವೆ’ ಎಂದು ವಿದ್ಯಾರ್ಥಿನಿಯೊಬ್ಬರು ಹೇಳಿದರು.