ಗದಗ: ನಾವು ಬಿಜೆಪಿ ಬಿಡುವ ಚಾನ್ಸೇ ಇಲ್ಲ. ಮಳೆ ಬಡಿದು ಸೊಸೆಯಾಗಿ ಬಿಜೆಪಿಗೆ ಬಂದ ನಾವು ಮನೆ ಮಗಳಾಗಿದ್ದೇವೆ ಅಂತ ಜಿಲ್ಲಾ ಉಸ್ತುವಾರಿ ಸಚಿವ ಬಿ. ಸಿ ಪಾಟೀಲ್ ಹೇಳಿದರು.ಗದಗನಲ್ಲಿ ನಿರ್ಮಾಣವಾಗುತ್ತಿರುವ ಬಿಜೆಪಿ ಕಚೇರಿ ನೂತನ ಕಟ್ಟಡ ಕಾಮಗಾರಿ ವೀಕ್ಷಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, 5 ಬೆರಳು ಒಂದೇ ಸಮನಾಗಿ ಇರುವುದಿಲ್ಲ. ಇನ್ನೂ ಐದು ಸಚಿವ ಸ್ಥಾನಗಳು ಖಾಲಿ ಇರುವುದರಿಂದ ಸಚಿವರಾಗಬೇಕೆಂಬ ಆಸೆ ಎಲ್ಲರಿಗೂ ಇರುವುದು ಸಹಜ. ಹೀಗಾಗಿ, ಕೆಲವರು ಸಚಿವರಾಗುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬುದನ್ನು ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ. ಕೆಲವರು ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದಾರೆ. ಪಕ್ಷದ ಹೈಕಮಾಂಡ್ ಯಾರನ್ನು ಮಾಡಬೇಕು ಎಂದು ಬಯಸುತ್ತಾರೋ ಅವರು ಸಚಿವರಾಗುತ್ತಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಾಧ್ಯವಿಲ್ಲ. ಸಿಎಂ ಬದಲಾವಣೆ ಸತ್ಯಕ್ಕೆ ದೂರವಾದ ಮಾತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ ನಡ್ಡಾ ಅವರು ಹೇಳಿದಂತೆ 2023 ರ ಚುನಾವಣೆವರೆಗೂ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಹೇಳಿದರು.
ಬಸವರಾಜ ಬೊಮ್ಮಾಯಿ 6 ತಿಂಗಳವರೆಗೆ ಮುಖ್ಯಮಂತ್ರಿ ಆಗುತ್ತಾರೆ ಅಂತಾ ಕಾಂಗ್ರೆಸ್‌ನವರಿಗೆ ಯಾರಾದರೂ ಬರೆದು ಕೊಟ್ಟಿದ್ದಾರಾ? ಅವರ ಮೇಲೆ ಅವರಿಗೆ ಅನುಮಾನವಿದೆ. ಅವರ ಕಾಲಕೆಳಗೆ ಹಳ್ಳ ಹೊಳೆಗಳು ಹರಿಯುತ್ತಿದ್ದು, ಯಾವಾಗ ಕಾಲುಜಾರಿ ಬೀಳುತ್ತಾರೋ ಗೊತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವಿನ ಕಚ್ಚಾಟದಿಂದಾಗಿ ರಾಜ್ಯದಲ್ಲಿಯೂ ಕಾಂಗ್ರೆಸ್ ಪತನವಾಗಲಿದೆ ಎಂದು ಬಿಸಿಪಿ ಭವಿಷ್ಯ ನುಡಿದರು.