ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ದೆಹಲಿಗೆ ಭೇಟಿ ನೀಡುವುದಾಗಿ ಪ್ರಕಟಿಸಿದ ಬೆನ್ನಲ್ಲೇ, ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭವಾಗಿದ್ದು, ಸಚಿವಕಾಂಕ್ಷಿ ಶಾಸಕರೂ ದೆಹಲಿಗೆ ಹೋಗಲು ತಯಾರಿ ನಡೆಸಿದ್ದಾರೆ.
ಸಚಿವ ಸಂಪುಟ ಪುನಾರಚನೆ ಮಾಡಿ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂಬ ಒತ್ತಡವೂ ಬಿಜೆಪಿಯಲ್ಲಿ ಪ್ರಬಲವಾಗಿ ಕೇಳಿ ಬಂದಿದೆ.
ಸುದ್ದಿಗಾರರ ಜತೆ ಬುಧವಾರ ಬೆಳಿಗ್ಗೆ ಮಾತನಾಡಿದ ಬೊಮ್ಮಾಯಿ, ಗುರುವಾರವೇ ದೆಹಲಿಗೆ ತೀರ್ಮಾನಿಸಿರುವುದಾಗಿ ಹೇಳಿದ್ದರು. ಆದರೆ, ಮಧ್ಯಾಹ್ನ ಮಾತನಾಡಿದ ಅವರು, ‘ಗುರುವಾರ ಭೇಟಿ ರದ್ದಾಗಿದೆ. ಸೋಮವಾರ ಬರುವಂತೆ ಸಂಸದರು ಮನವಿ ಮಾಡಿದ್ದಾರೆ. ಆದ್ದರಿಂದ ಅಂದೇ ಹೋಗಲಿದ್ದೇನೆ’ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ‘ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಲು ಹೋಗುತ್ತಿಲ್ಲ. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಎಲ್ಲವೂ ವರಿಷ್ಠರಿಗೆ ಬಿಟ್ಟಿದ್ದು’ ಎಂದು ಪ್ರತಿಕ್ರಿಯಿಸಿದರು.
‘ದೆಹಲಿ ಭೇಟಿ ವೇಳೆ ಪಕ್ಷದ ವರಿಷ್ಠರನ್ನು ಭೇಟಿಯಾಗಲಿರುವ ಬೊಮ್ಮಾಯಿ, ಸಂಪುಟ ಪುನಾರಚನೆ ಅಥವಾ ವಿಸ್ತರಣೆ, ನಿಗಮ-ಮಂಡಳಿಗಳ ನೇಮಕ ಸಂಬಂಧಿಸಿದಂತೆ ಪ್ರಸ್ತಾಪಿಸುವ ಸಾಧ್ಯತೆ ಇದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಭೇಟಿಗೆ ಸಮಯ ಕೇಳಲಿದ್ದಾರೆ. ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ’ ಎಂದು ಮೂಲಗಳು ಹೇಳಿವೆ.