ಗೋಕಾಕ: ಪೀರಣವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿಚಾರವಾಗಿ ನಾಳೆ ಬೆಳಗಾವಿ ಪ್ರವಾಸಿ ಮಂದಿರದಲ್ಲಿ 12 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಕುರುಬ ಸಮುದಾಯ ಹಾಗೂ ಅಧಿಕಾರಿಗಳ ಸಭೆ ನಡೆಸಲಿದ್ದಾರೆ ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ರಾಜ್ಯಾಧ್ಯಕ್ಷ ರಾಜೇಂದ್ರ ಸಣ್ಣಕ್ಕಿ ಹೇಳಿದ್ದಾರೆ.
ಗೋಕಾಕ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುರುಬ ಸಂಘದ ಪದಾಧಿಕಾರಿಗಳ ನೇತೃತ್ವದ ನಿಯೋಗ ಇಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ, ಗಣೇಶ ಹಬ್ಬ ಮುಗಿಯುವವರೆಗೂ ವಿಳಂಬ ಮಾಡದೇ ಆದಷ್ಟು ಬೇಗ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ ಬಗೆಹರಿಸುವಂತೆ ಮನವಿ ಮಾಡಿದ್ದೇವೆ. ನಮ್ಮ ಮನವಿಗೆ ಸಚಿವರು ಸ್ಪಂದಿಸಿ ನಾಳೆಯೇ ಸಭೆ ಕರೆದಿದ್ದಾರೆ. ಹೀಗಾಗಿ ಸಂಘ ಸಂಸ್ಥೆಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿದರು.
ಪ್ರತಿಮೆ ವಿಚಾರವಾಗಿ ಸಿಎಂ ಜತೆ ಮಾತುಕತೆ ನಡೆಸಿದ್ದೇನೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ರೇವಣ್ಣ ಅವರು ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಹೇಳಿದ್ದಾರೆ. ಸೌಹಾರ್ದಯುತವಾಗಿ ನಿರ್ಣಯ ತೆಗೆದುಕೊಳ್ಳಲು ಸಭೆ ಆಹ್ವಾನಿಸಿದ್ದೇನೆ ಎಂದು ಸಚಿವ ರಮೇಶ ಜಾರಕಿಹೊಳಿ ಭರವಸೆ ನೀಡಿದ್ದಾರೆ.
ಉಸ್ತುವಾರಿ ಸಚಿವರು, ಸರ್ಕಾರ ಪೂರಕವಾಗಿ ನಮ್ಮ ಮನವಿಗೆ ಸ್ಪಂದನೆ ನೀಡುತ್ತಿದೆ. ಸರ್ಕಾರದೊಂದಿಗೆ ಸಂಘರ್ಷಕ್ಕೀಳಿಯದೇ ನಮ್ಮ ಕೆಲಸ ಮಾಡಿಕೊಳ್ಳಬೇಕಿದೆ. ರಾಯಣ್ಣ ಯಾವುದೇ ಜಾತಿ, ಭಾಷೆ ಸೀಮಿತವಲ್ಲ. ಆತ ದೇಶದ ಆಸ್ತಿ. ಆ ದಿಶೆಯಲ್ಲಿ ಪ್ರತಿಮೆ ಸ್ಥಾಪನೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದೇವೆ. ಸಭೆಯಲ್ಲಿ ನಿರ್ಣಯ ನಮ್ಮ ಪರ ಬರದಿದ್ದಲ್ಲಿ ಮುಂದಿನ ಹೋರಾಟ ರೂಪುರೇಷೆ ಸಜ್ಜುಗೊಳಿಸೋಣ. ಅಲ್ಲಿಯವರೆಗೂ ಹೋರಾಟ ಸ್ಥಗಿತಗೊಳಿಸುವಂತೆ ಸಂಘ-ಸಂಸ್ಥೆಗಳಿಗೆ ರಾಜೇಂದ್ರ ಸಣ್ಣಕ್ಕಿ ಮನವಿ ಮಾಡಿದ್ದಾರೆ.