ಬೆಂಗಳೂರು, ಜ. 31: ಜಿಲ್ಲಾ ಉಸ್ತುವಾರಿಗಳ ಖಾತೆ ಹಂಚಿಕೆ ಬೆನ್ನಲ್ಲೇ ಸರ್ಕಾರದ ಹಲವು ಸಚಿವರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಈ ಮಧ್ಯೆ ಪ್ರವಾಸೋದ್ಯ ಸಚಿವ ಆನಂದ್ ಸಿಂಗ್ ಅವರು ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿಯ ಕೆಲವು ಶಾಸಕರು ಸಂಪರ್ಕದಲ್ಲಿದ್ದಾರೆ. ಮುಂದಿನ ಚುನಾವಣೆ ವೇಳೆಗೆ ಕಾಂಗ್ರೆಸ್ ಸೇರುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಬಿಜೆಪಿ, ಕಾಂಗ್ರೆಸ್ ಸಂಪರ್ಕದಲ್ಲಿರುವ ಶಾಸಕರ ಹೆಸರು ಹೇಳಲಿ ಎಂದು ಸವಾಲು ಹಾಕಿತ್ತು. ಈ ಮಧ್ಯೆ ರಾಜ್ಯ ಸಂಪುಟದ ಸಚಿವರೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿರುವುದು ಬಿಜೆಪಿಯೊಳಗೆ ಎಲ್ಲವೂ ಸರಿಯಿಲ್ಲ ಎಂಬ ಸಂದೇಶವನ್ನು ನೀಡಿದಂತಾಗಿದೆ.
ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ ನಿವಾಸಕ್ಕೆ ಖಾಸಗಿ ಕಾರಿನಲ್ಲಿ ಬಂದು ಭೇಟಿ ಮಾಡಿದ ಸಚಿವ ಆನಂದ್ ಸಿಂಗ್ ಕೆಲ ಕಾಲ ಮಾತುಕತೆ ನಡೆಸಿದರು. ಇದಕ್ಕೆ ರಾಜಕೀಯ ಬಣ್ಣ ಕಲ್ಪಿಸಬೇಡಿ ಎಂದು ಉಭಯ ನಾಯಕರು ಹೇಳಿದರೂ ಸಹ, ಸುಮಾರು ಅರ್ಧ ತಾಸಿಗೂ ಹೆಚ್ಚಿನ ಕಾಲ ನಡೆದ ಮಾತುಕತೆ ಏನಿರಬಹುದು ಎಂದು ಹಲವರಲ್ಲಿ ಪ್ರಶ್ನೆ ಮೂಡಿಸಿರುವುದು ಸಹಜ.
ಸಚಿವರಲ್ಲಿ ಅಸಮಾಧಾನ:
ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ನಂತರ ಸರ್ಕಾರದಲ್ಲಿ ಸಾಕಷ್ಟು ಅಸಮಾಧಾನ ಹೊಗೆಯಾಡುತ್ತಿದೆ. ಕೆಲವುರ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದಾರೆ. ಸಚಿವರಾದ ಆರ್. ಅಶೋಕ್, ಜೆ.ಸಿ. ಮಾಧುಸ್ವಾಮಿ ತಮಗೆ ಉಸ್ತುವಾರಿ ಸಿಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ವಿಜಯನಗರ ಜಿಲ್ಲೆಯ ರಚನೆಗೆ ಶ್ರಮಿಸಿದ ಸಚಿವ ಆನಂದ್ ಸಿಂಗ್ ಅವರಿಗೆ ಕೊಪ್ಪಳ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಈ ಬಗ್ಗೆ ಬಹಿರಂಗವಾಗಿ ಯಾವುದೇ ಅಸಮಾಧಾನ ಇಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡರೂ ಸಹ ವಿಜಯನಗರ ಜಿಲ್ಲೆಯ ಉಸ್ತುವಾರಿ ಕೊಡದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅಲ್ಲದೆ, ಕೊಪ್ಪಳದಲ್ಲಿ ಮಾತನಾಡಿದ್ದ ಆನಂದ್ ಸಿಂಗ್, ‘ಕೊಪ್ಪಳ ಜಿಲ್ಲೆಯ ಉಸ್ತುವಾರಿ ನೀಡಿರುವುದಕ್ಕೆ ನನಗೆ ಬೇಸರ ಇಲ್ಲ. ಒಂದು ವೇಳೆ ಯಾರಿಗಾದರೂ ಅನುಮಾನ ಇದ್ದವರು ನನ್ನ ಮಂಪರು ಪರೀಕ್ಷೆ ಮಾಡಬಹುದು’ ಎಂದು ಹೇಳಿದ್ದರು. ಅಲ್ಲದೆ, ಬಿಜೆಪಿಯಿಂದ ಕಾಂಗ್ರೆಸ್ ಸೇರುವವರು ಯಾರೂ ಇಲ್ಲ, ಕಾಂಗ್ರೆಸ್‌ನಿಂದಲೇ ಬಿಜೆಪಿ ಸೇರುವವರು ಇದ್ದಾರೆ ಎಂದು ಹೇಳಿಕೆ ನೀಡಿದ್ದರು. ಹೀಗೆ ಮಾತನಾಡಿದ್ದ ಆನಂದ್ ಸಿಂಗ್ ಈಗ ಅವರೇ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.