ಬೆಂಗಳೂರು, : ವಿಕಲಚೇತನ ಮಹಿಳೆಗೆ ಬೀದಿಯಲ್ಲಿ ಬೂಟು ಕಾಲಿನಲ್ಲಿ ಒದ್ದ ಪ್ರಕರಣ ರಾಜ್ಯದಲ್ಲಿ ಟೋಯಿಂಗ್ ವ್ಯವಸ್ಥೆ ಬದಲಾವಣೆಗೆ ಮುನ್ನಡಿ ಬರೆದಿದೆ. ಪ್ರಕರಣ ಸಂಬಂಧ ಹಲಸೂರು ಗೇಟ್ ಎಎಸ್‌ಐ ನಾರಾಯಣ ಅವರನ್ನು ಅಮಾನತು ಮಾಡಲಾಗಿದೆ. ಇನ್ನು ಘಟನೆ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಪ್ರಕರಣ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಿ ವರದಿ ನೀಡುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಆದೇಶ ಮಾಡಿದ್ದಾರೆ.
ಟೋಯಿಂಗ್‌ನಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಚರ್ಚಿಸಿ ಜನಸ್ನೇಹಿ ವ್ಯವಸ್ಥೆ ಜಾರಿಗೆ ತರುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದಾರೆ. ಈಗಿರುವ ಟೋಯಿಂಗ್ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ಪೊಲೀಸ್ ಆಯುಕ್ತ ಕಮಲಪಂತ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ನೇತೃತ್ವದಲ್ಲಿ ಸಭೆಯಲ್ಲಿ ಮುಖ್ಯಮಂತ್ರಿ ಚರ್ಚೆ ನಡೆಸಲಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಮಹತ್ವದ ಹೇಳಿಕೆ ಕೂಡ ನೀಡಿದ್ದಾರೆ.
ಮಹಿಳೆ ಮೇಲೆ ಪೊಲೀಸ್ ಹಲ್ಲೆ ನಡೆಸಿದ ಪ್ರಕರಣದ ಬಗ್ಗೆ ಈಗಾಗಲೇ ತನಿಖೆಗೆ ಆದೇಶಿಸಿದ್ದೇನೆ. ಈಗಿರುವ ಟೋಯಿಂಗ್ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ತೊಂದರೆ ಆಗಿರುವ ಬಗ್ಗೆ ಅನೇಕ ದೂರುಗಳು ಬಂದಿವೆ. ಈಗಿನ ಟೋಯಿಂಗ್‌ನ್ನು ಖಾಸಗಿಯವರಿಗೆ ನೀಡಲಾಗಿದೆ. ಜನರ ಮೇಲೆ ಹಲ್ಲೆ ನಡೆಸುವ ಬದಲಿಗೆ ತಿಳಿ ಹೇಳಿ ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಬದಲಿಸುವ ನಿಟ್ಟಿನಲ್ಲಿ ಸಭೆ ಕರೆದಿದ್ದೇನೆ ಜನ ಸ್ನೇಹಿ ಟೋಯಿಂಗ್ ವ್ಯವಸ್ಥೆಯನ್ನು ತರುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದೇವೆ. ಈ ಕುರಿತು ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ರಾಜಧಾನಿಯಲ್ಲಿ ಸಂಚಾರ ಪೊಲೀಸರು ವಿಧಿಸುವ ಯಾವ ದಂಡದ ವಿರುದ್ಧ ಸಾರ್ವಜನಿಕರು ಚಕಾರ ಎತ್ತುವುದಿಲ್ಲ. ದಂಡ ಹಾಕಿದರೂ ಪಾವತಿಸುತ್ತಾರೆ. ಆದರೆ ಟೋಯಿಂಗ್ ವಿಚಾರದಲ್ಲಿ ಪರಿಸ್ಥಿತಿ ಬೇರೆಯಿದೆ. ಟೋಯಿಂಗ್ ಮೇಲಿನ ಜನರ ಅಸಹನೆ ಪದೇ ಪದೇ ಹೊರ ಹಾಕುತ್ತಿದ್ದಾರೆ. ಯಲಹಂಕದಲ್ಲಿ ಟೋಯಿಂಗ್ ವಾಹನದ ಮೇಲೆ ಹತ್ತಿ ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು. ಬಾಣಸವಾಡಿಯಲ್ಲಿ ಟೋಯಿಂಗ್ ವಾಹನ ಚಾಲಕನಿಗೆ ಕಲ್ಲು ತೂರಿ ಅಟ್ಟಾಡಿಸಿ ಸಾರ್ವಜನಿಕರೇ ಥಳಿಸಿದ್ದರು. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಹ ಇಂಥದ್ದೇ ಪ್ರಕರಣ ಇತ್ತೀಚೆಗೆ ವರದಿಯಾಗಿತ್ತು. ಟೋಯಿಂಗ್ ಹೆಸರಿನಲ್ಲಿ ಕೇವಲ ಮಧ್ಯಮ ವರ್ಗದ ದ್ವಿಚಕ್ರ ವಾಹನಗಳನ್ನು ಟಾರ್ಗೆಟ್ ಮಾಡುತ್ತಿರುವ ಟೋಯಿಂಗ್ ವಾಹನಗಳ ವಿರುದ್ಧ ಸಾರ್ವಜನಿಕರು ರೊಚ್ಚಿಗೇಳುವ ಮಟ್ಟಿಗೆ ಸಿಟ್ಟಾಗಿದ್ದಾರೆ.