ಬೆಂಗಳೂರು: ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿಗಳ ಕುರಿತು ಅವಲೋಕನ ನಡೆಸಲು ತಾಂತ್ರಿಕ ಸಮಿತಿಯ ಸದಸ್ಯರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ಶನಿವಾರ) ಸಭೆ ನಡೆಸಲಿದ್ದಾರೆ.
ರಾತ್ರಿ ಕರ್ಫ್ಯೂ ಸಡಿಲಿಕೆ, ಬೆಂಗಳೂರಲ್ಲಿ ಶಾಲೆ ಮತ್ತೆ ಆರಂಭಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ಸುದ್ದಿಗಾರರ ಜೊತೆ ಶನಿವಾರ ಬೆಳಿಗ್ಗೆ ಮಾತನಾಡಿದ ಮುಖ್ಯಮಂತ್ರಿ, ‘ಜಿಲ್ಲೆಗಳಲ್ಲಿ ಮತ್ತು ಬೆಂಗಳೂರು ನಗರದಲ್ಲಿ ಕೋವಿಡ್ ಸ್ಥಿತಿಗತಿಗಳ ವಿವರ ತೆಗೆದುಕೊಂಡು ಕೆಲವು ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.
‘ಮೊದಲು ಕೃಷಿ ಇಲಾಖೆಗೆ ಸಂಬಂಧಿಸಿದ ಸಭೆ ಇದೆ. ಆ ಬಳಿಕ ಕೋವಿಡ್ ತಾಂತ್ರಿಕ ಸಹಲಾ ಸಮಿತಿಯ ಜೊತೆ ಸಭೆ ಮಾಡುತ್ತೇನೆ’ ಎಂದರು.
ಸದ್ಯ ಜಾರಿಯಲ್ಲಿರುವ ಶೇ 50ರಷ್ಟು ನಿಯಮಕ್ಕೆ ಹೋಟೆಲ್ ಉದ್ಯಮ, ಮದ್ಯ ಮಾರಾಟಗಾರರು, ಸಿನಿಮಾ ರಂಗದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಶೇ 50ರಷ್ಟು ನಿಯಮ ತೆಗೆಯುವಂತೆ ಸಚಿವರು, ಶಾಸಕರಿಂದಲೂ ಒತ್ತಾಯ ಕೇಳಿಬಂದಿದೆ. ಹೀಗಾಗಿ, ಇಂದಿನ ಸಭೆಯಲ್ಲಿ ಈ ನಿಯಮ ಸಡಿಲಿಸುವ ಅಥವಾ ತೆರವು ಕುರಿತು ತೀರ್ಮಾನಿಸುವ ಸಾಧ್ಯತೆ ಇದೆ. ಅಲ್ಲದೆ, ರಾತ್ರಿ ಕರ್ಫ್ಯೂ ಅವಧಿ ಕಡಿತಗೊಳಿಸುವಂತೆಯೂ ಒತ್ತಾಯ ಕೇಳಿಬಂದಿದೆ. ಈ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.