ದಾವಣಗೆರೆ: ಕೊರೊನಾ, ಒಮಿಕ್ರಾನ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ವೀಕೆಂಡ್ ಕರ್ಫ್ಯೂ ನಿಯಮ, ಮಾರ್ಗಸೂಚಿ ಉಲ್ಲಂಘಿಸಿ ಜಗಳೂರು ಶಾಸಕ ಎಸ್.ವಿ. ರಾಮಚಂದ್ರಪ್ಪ ಭಾನುವಾರ ನೂರಾರು ಜನರ ನಡುವೆ ಅದ್ದೂರಿಯಾಗಿ ಜನ್ಮ ದಿನ ಆಚರಿಸಿಕೊಂಡಿದ್ದಾರೆ.
ಕೆ.ಬಿ. ಬಡಾವಣೆಯ ಗುಳ್ಳಮ್ಮನ ದೇವಸ್ಥಾನದ ಪಕ್ಕದಲ್ಲೇ ಬೃಹತ್ ಶಾಮಿಯಾನ, ವೇದಿಕೆಯಲ್ಲಿ ಜನ್ಮದಿನ ಆಚರಿಸಿಕೊಂಡರು.
ಶಿಸ್ತಿನ ಪಕ್ಷ ಎಂದೇ ಹೇಳಿಕೊಳ್ಳುವ ಆಡಳಿತಾರೂಢ ಪಕ್ಷದ ಕೆಲ ಮುಖಂಡರು, ಜನಪ್ರತಿನಿಧಿಗಳು, ಜಿಲ್ಲಾ, ತಾಲೂಕು ಪಂಚಾಯತ್ ಮಾಜಿ ಸದಸ್ಯರು ಸರತಿ ಸಾಲಲ್ಲಿ ನಿಂತು ಜನ್ಮದಿನದ ಶುಭ ಕೋರಿದರು.
ಅಚ್ಚರಿ ಮತ್ತು ಆಶ್ಚರ್ಯ ಎಂದರೆ ಕೊರೊನಾ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಸುವ ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಯೇ ಸರತಿ ಸಾಲಲ್ಲಿ ಬಂದು ಶುಭ ಕೋರಿದರು.
ಜನಸಾಮಾನ್ಯರು ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿದಂತೆ ನೋಡಿಕೊಳ್ಳಬೇಕಾದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ವೇದಿಕೆಗೆ ತೆರಳಿ ಶುಭ ಕೋರಿದರು.
ಕೊರೊನಾ ಮಾರ್ಗಸೂಚಿ ನಿಯಮಗಳು ಖುಲ್ಲಾಂಖುಲ್ಲ ಉಲ್ಲಂಘನೆ ಆಗುತ್ತಿದ್ದ ಜನ್ಮ ದಿನದ ಸಮಾರಂಭಕ್ಕೆ ಸ್ವತಃ ಪೊಲೀಸ್ ಇಲಾಖೆಯಿಂದಲೇ ಭದ್ರತೆ ಒದಗಿಸಲಾಗಿತ್ತು.