ಬೆಂಗಳೂರು: ‘ನಂದಿನಿ’ ಹಾಲಿನ ದರ ಏರಿಕೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು’ ಎಂದು ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಕೆಎಂಎಫ್ 2020-21ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಹಾಲಿನ ದರ ಪ್ರತಿ ಲೀಟರ್‌ಗೆ ₹ 3 ಹೆಚ್ಚಿಸಲು ಎಲ್ಲ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಕೋರಿದ್ದಾರೆ’ ಎಂದು ತಿಳಿಸಿದರು.
‘ಹೆಚ್ಚಿಸಿದರೆ ಲೀಟರ್ ಹಾಲಿಗೆ ಈಗಿರುವ ₹ 37ರಿಂದ ₹ 40 ದರ ಆಗಲಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ದರ ಅತಿ ಕಡಿಮೆ ಇದೆ. ದರ ಹೆಚ್ಚಿಸಿದರೆ ಆ ಹಣವನ್ನು (₹ 3) ರೈತರಿಗೆ ನೀಡಲಾಗುವುದು’ ಎಂದೂ ಹೇಳಿದರು.
‘ಪ್ರಸಕ್ತ ವರ್ಷ (2021-22) ಕೆಎಂಎಫ್‌ನ 5 ಪಶು ಆಹಾರ ಘಟಕಗಳಿಂದ 7.28 ಲಕ್ಷ ಟನ್ ಪಶು ಆಹಾರ ಉತ್ಪಾದಿಸಿ ಮಾರಾಟ ಮಾಡುವ ಗುರಿ ಇದೆ. ಅಂದಾಜು ₹1,017 ಕೋಟಿ ವಹಿವಾಟು ನಿರೀಕ್ಷೆ ಇದೆ’ ಎಂದರು.
‘ಬೆಳಗಾವಿಯಲ್ಲಿ ನಂದಿನಿ ಮೆಗಾ ಫುಡ್ ಪಾರ್ಕ್ ಆರಂಭಿಸುವ ಕಾರ್ಯ ಪ್ರಗತಿಯಲ್ಲಿದೆ. ಹೊರರಾಜ್ಯಗ ಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಸಮಗ್ರ ಮಾರುಕಟ್ಟೆ ಅಭಿವೃದ್ಧಿ ಯೋಜನೆ- 2022-2026 ರೂಪಿಸಲಾಗಿದೆ’ ಎಂದರು.