ಇಳಕಲ್: ಬಾದಾಮಿಯ ಬನಶಂಕರಿ ದೇವಿ ಜಾತ್ರೆಗೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ನೂರಾರು ಭಕ್ತರನ್ನು ತಡೆಯಲು ಶನಿವಾರ ಪೊಲೀಸರು ಇಡೀ ದಿನ ಕಷ್ಟಪಟ್ಟರು.
ಪ್ರತಿವರ್ಷ ಇಳಕಲ್‍ದಿಂದ 10ಸಾವಿರಕ್ಕೂ ಅಧಿಕ ಭಕ್ತರು ಬನಶಂಕರಿ ದರ್ಶನಕ್ಕೆ ಹೋಗುತ್ತಿದ್ದರು.
ಈಗ ಕೋವಿಡ್ ಕಾರಣ ಪಾದಯಾತ್ರೆಗೆ ನಿರ್ಬಂಧ ಹೇರಿದೆ. ಪೊಲೀಸರು ತಡೆದರೂ ಹೊಲ, ಕಾಲುದಾರಿ ಮೂಲಕ ಸಾಗುತ್ತಿದ್ದುದು ಕಂಡುಬಂದಿತು. ಅಲ್ಲಿಯೂ ತಡೆಯುವ ಪೊಲೀಸರ ಯತ್ನ ಫಲನೀಡಲಿಲ್ಲ.
21ರವರೆಗೆ ಶಾಲೆಗೆ ರಜೆ
ಕಾರವಾರ ನಗರ, ಹೊನ್ನಾವರ ಪಟ್ಟಣದ ಪ್ರಾಥಮಿಕ ಶಾಲೆಗಳಿಗೆ (1ರಿಂದ 8ನೇ ತರಗತಿ) ಜ.17ರಿಂದ 21ರವರೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
28 ವಿದ್ಯಾರ್ಥಿನಿಯರಿಗೆ ಕೋವಿಡ್
ತಾಲ್ಲೂಕಿನಲ್ಲಿ ಶನಿವಾರ 38 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಪಟ್ಟಣದ ಕೆಎಲ್‌ಇ ವಸತಿಗೃಹದ 28 ನರ್ಸಿಂಗ್ ವಿದ್ಯಾರ್ಥಿನಿಯರನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗಿದೆ. ನರ್ಸಿಂಗ್ ಕಾಲೇಜಿಗೆ ಜ.20ರವರೆಗೆ ರಜೆ ಘೋಷಿಸಲಾಗಿದೆ.
16 ವಿದ್ಯಾರ್ಥಿಗಳಿಗೆ ಕೋವಿಡ್
ಬೀದರ್ ಜಿಲ್ಲೆಯ ಹುಮನಾಬಾದ್‌ನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ 16 ವಿದ್ಯಾರ್ಥಿಗಳಿಗೆ ಶನಿವಾರ ಕೋವಿಡ್ ದೃಢಪಟ್ಟಿದೆ.
ರಾಯಚೂರು ಜಿಲ್ಲೆಯ ಮಸ್ಕಿಯ ಅಂಬೇಡ್ಕರ್ ವಸತಿ ಶಾಲೆಯ ಇಬ್ಬರು, ಅಡವಿಭಾವಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಒಬ್ಬರು ಮತ್ತು ಕವಿತಾಳದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಕೋವಿಡ್ ದೃಢಪಟ್ಟಿದೆ.