ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಪರಿಷತ್, ರಾಜಕೀಯ ಪುನರ್ವಸತಿ ಕೇಂದ್ರದಂತಾಗುತ್ತಿರುವುದು ದುರದೃಷ್ಟಕರ ಎಂದು ಸಭಾಪತಿ ಬಸವರಾಜ ಹೊರಟ್ಟಿ ವಿಷಾದ ವ್ಯಕ್ತಪಡಿಸಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 114 ವರ್ಷ ಇತಿಹಾಸವಿರುವ ಪರಿಷತ್‍ಗೆ ತನ್ನದೇ ಆದ ಘನತೆಯಿದೆ. ಅದಕ್ಕೆ ಚ್ಯುತಿಯಾಗದಂತೆ ಉಳಿಸಿ ಮುಂದುವರಿಸಿಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಯಲ್ಲಿ ಕಿರಿಯ ವಯಸ್ಸಿನವರೇ ಹೆಚ್ಚಾಗಿ ಆರಿಸಿ ಬಂದಿದ್ದು, ಸೂಕ್ತ ತರಬೇತಿ, ಮಾಹಿತಿ ನೀಡಲು ಕ್ರಮ ವಹಿಸಲಾಗುತ್ತಿದೆ. ಪರಿಷತ್‍ಗೆ ಸಾಧ್ಯವಾದಷ್ಟು ಪ್ರಬುದ್ಧರಿಗೆ ಆದ್ಯತೆ ನೀಡುವಂತೆ ಎಲ್ಲ ರಾಜಕೀಯ ಪಕ್ಷಗಳಲ್ಲಿ ಮನವಿ ಮಾಡಲಾಗುವುದು ಎಂದು ತಿಳಿಸಿದರು.
