ಚಿಕ್ಕೋಡಿ: ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ಮಾರ್ಗಸೂಚಿಗಳನ್ನು ಜಾರಿ ಮಾಡಿದರೂ ಬಿಜೆಪಿ ಮುಖಂಡರಿಂದಲೇ ನಿಯಮಗಳನ್ನು ಉಲ್ಲಂಘಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕುರಣಿವಾಡಿ ಗ್ರಾಮದಲ್ಲಿ ಬಿಜೆಪಿ ಮುಖಂಡ ಮಾರುತಿ ಅಷ್ಟಗಿ ಅದ್ಧೂರಿ ಸಮಾರಂಭದಲ್ಲಿ ಚಿಕ್ಕಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸ್ಫೋಟಗೊಳ್ಳುತ್ತಿದ್ದು, ಗಡಿ ಜಿಲ್ಲೆಯಲ್ಲೆ ಈ ರೀತಿ ಸರ್ಕಾರದ ನಿಯಮಗಳನ್ನು ಬಿಜೆಪಿ ಮುಖಂಡರು ಗಾಳಿಗೆ ತೂರಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಮಾಸ್ಕ್, ಸಾಮಾಜಿಕ ಅಂತರ ಮರೆತು ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಇದರಿಂದ ಕೊರೊನಾ ತಡೆಯಲು ಸರ್ಕಾರ ವಿಧಿಸಿದ್ದ ನಿಯಮಗಳನ್ನು ಉಲ್ಲಂಘನೆ ಆಗಿದೆ. ಸರ್ಕಾರ ರಚನೆ ಮಾಡಿರುವ ನಿಯಮಗಳನ್ನು ಬಿಜೆಪಿ ಅವರೇ ಪಾಲನೆ ಮಾಡದೇ ಇದ್ದಲ್ಲಿ ಹೇಗೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.