ಬೆಳಗಾವಿ: ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ದಲಿತ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾದ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ನಡೆದಿದೆ. ಡಿಸೆಂಬರ್ 29 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಿಸಿ ಸಾಂಬಾರು ಎಸೆಯಲು ಯತ್ನ ಆರೋಪ
ಪ್ರಾರ್ಥನೆ ಮಾಡುತ್ತಿದ್ದ ವೇಳೆ 7 ಮಂದಿ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದು, ಘಟಪ್ರಭ ಪೊಲೀಸ್ ಠಾಣೆಗೆ ಕವಿತಾ ಕರಗಣವಿ ಎಂಬವರು ದೂರು ನೀಡಿದ್ದಾರೆ. ಜನರನ್ನು ಕ್ರೈಸ್ತ ಧರ್ಮಕ್ಕೆ ಏಕೆ ಮತಾಂತರ ಮಾಡಿಸುತ್ತಿದ್ದೀರಿ ಎಂದು ಪ್ರಶ್ನಿಸಿ ಹಲ್ಲೆ ಮಾಡಲಾಗಿದೆ. ಅಲ್ಲದೇ ಮಹಿಳೆ ಮೇಲೆ ಕಿಡಿಗೇಡಿಗಳು ಬಿಸಿ ಸಾಂಬಾರು ಎಸೆಯಲು ಯತ್ನಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತುಕ್ಕಾನಟ್ಟಿ ಗ್ರಾಮದ ಶಿವಾನಂದ ಗೋಟೂರು, ರಮೇಶ ದಂಡಾಪೂರ, ಪರಸಪ್ಪ ಬಾಬು, ಫಕ್ಕೀರಪ್ಪ ಬಾಗೇವಾಡಿ, ಕೃಷ್ಣ ಕಾನಿಟ್ಕರ್, ಕಂಕನವಾಡಿಯ ಚೇತನ ಗಡಾಡಿ, ಹತ್ತರಕಿ ಗ್ರಾಮದ ಮಹಾಂತೇಶ ಹತ್ತರಗಿ ವಿರುದ್ಧ ದೂರು ದಾಖಲಾಗಿದೆ. ಘಟನೆ ನಡೆದು ಎರಡು ದಿನ ಕಳೆದರೂ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಪ್ರಕರಣ ಮುಚ್ಚಿಹಾಕಲು ಯತ್ನ ನಡೆದಿದೆ ಎಂದು ನೊಂದ ಕುಟುಂಬಸ್ಥರು ಆರೋಪಿಸಿದ್ದಾರೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.