ನವದೆಹಲಿ, ಡಿಸೆಂಬರ್ 30: ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೊಸ ದಾಖಲೆ ಬರೆದಿದೆ. ಕಳೆದೊಂದು ತಿಂಗಳಿನಲ್ಲೇ ಮೊದಲ ಬಾರಿಗೆ ಒಂದೇ ದಿನದಲ್ಲಿ 10,000ಕ್ಕೂ ಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿವೆ. ಇದರ ಮಧ್ಯೆ ಓಮಿಕ್ರಾನ್ ರೂಪಾಂತರ ಸೋಂಕಿತರ ಸಂಖ್ಯೆಯು 961ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 13,154 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಒಂದೇ ದಿನದಲ್ಲಿ 268 ಮಂದಿ ಕೊವಿಡ್-19 ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದು, ಇದೇ ಅವಧಿಯಲ್ಲಿ 7,486 ಸೋಂಕಿತರು ಗುಣಮುಖರಾಗಿದ್ದಾರೆ.
ಡಿಸೆಂಬರ್ 29ರ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಈವರೆಗೂ 3,42,58,778 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ 4,80,860 ಮಂದಿ ಸೋಂಕಿನಿಂದ ಜೀವ ಬಿಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಭಾರತದಲ್ಲಿ 961 ಓಮಿಕ್ರಾನ್ ಪ್ರಕರಣ:
ದೇಶದಲ್ಲಿ ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆ 961ಕ್ಕೆ ಏರಿಕೆಯಾಗಿದೆ. ದೆಹಲಿ 263, ಮಹಾರಾಷ್ಟ್ರ 252 ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿದ್ದು, ಅತಿಹೆಚ್ಚು ಪ್ರಕರಣಗಳನ್ನು ವರದಿ ಮಾಡಿರುವ ರಾಜ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿವೆ. ಇದರ ಹೊರತಾಗಿ ಗುಜರಾತ್ 97, ರಾಜಸ್ಥಾನ 69, ಕೇರಳ 65, ತೆಲಂಗಾಣ 62, ತಮಿಳುನಾಡು 45, ಕರ್ನಾಟಕ 34, ಆಂಧ್ರ ಪ್ರದೇಶ 16, ಹರಿಯಾಣ 12 ಮತ್ತು ಪಶ್ಚಿಮ ಬಂಗಾಳದಲ್ಲಿ 11 ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿವೆ.