ಬೆಂಗಳೂರು, ಡಿ. 28: ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟದಲ್ಲಿ ಮೇಜರ್ ಸರ್ಜರಿ ಆಗಲಿದೆ. ಮುಂದಿನ ಸಂಕ್ರಾಂತಿ ವೇಳೆಗೆ ಸಚಿವ ಸಂಪುಟದಲ್ಲಿ some ಕ್ರಾಂತಿ ಆಗಲಿವೆ. ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಬೃಹತ್ ಕೈಗಾರಿಕ ಸಚಿವ ಮುರುಗೇಶ್ ನಿರಾಣಿ ಸೇರಿದಂತೆ ಕೆಲವರು ಸಚಿವ ಸ್ಥಾನದಿಂದ ನಿರ್ಗಮಿಸಲಿದ್ದಾರೆ ಎಂಬ ಹೊಸ ಸಂಗತಿ ಬಿಜೆಪಿ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಹುಟ್ಟು ಹಾಕಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ಆಗುತ್ತಾರೆ ಎಂಬ ಸುದ್ದಿ ಹಬ್ಬಿದೆ. ತೆರವಾಗಲಿರುವ ಸಿಎಂ ಸ್ಥಾನಕ್ಕೆ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಆಯ್ಕೆಯಾಗುವ ಸಾಧ್ಯತೆಯಿದೆ ಎಂದೇ ದೊಡ್ಡ ಸುದ್ದಿಯಾಗಿತ್ತು. ಇತ್ತೀಚೆಗೆ ಬಿಜೆಪಿ ಪಾಳಯದಲ್ಲಿ ಮಹತ್ವದ ಬೆಳವಣಿಗೆ ಆಗಿವೆ. ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಿಕೊಂಡಿದ್ದ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನದಿಂದ ಕೋಕ್ ಕೊಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಪಂಚಮಸಾಲಿ ಹೋರಾಟದ ಬೆನ್ನಲ್ಲಿ ಮರುಗೇಶ್ ನಿರಾಣಿ ಸಚಿವ ಸ್ಥಾನ ಅಲಂಕರಿಸಿದ್ದರು. ಸಚಿವರಾದ ಬಳಿಕ ಪಂಚಮಸಾಲಿ ಹೋರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಿರಲಿಲ್ಲ. ಹೀಗಾಗಿ ಹೋರಾಟಗಾರರು ಮುನಿಸಿಕೊಂಡಿದ್ದರು. ದಿಢೀರ್ ಬೆಳವಣಿಗೆ ಹಿನ್ನೆಲೆಯಲ್ಲಿ ಮುರುಗೇಶ್ ನಿರಾಣಿ ಸಿಎಂ ಅಭ್ಯರ್ಥಿಯಾಗಲಿದ್ದಾರೆ ಎಂಬ ಸಂಗತಿ ಹೊರ ಬಿದ್ದ ಬೆನ್ನಲ್ಲೇ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಪಂಚಮಸಾಲಿ ಹೋರಾಟ ನೇತೃತ್ವ ವಹಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಬಳಿ ಸಂಧಾನಕ್ಕೆ ತೆರಳಿದ್ದಾರೆ. ನಿರಾಣಿ ಸಿಎಂ ಆದರೆ ನೀವು ಕ್ಯಾಬಿನೆಟ್‌ಗೆ ಸೇರ್ಪಡೆ ಆಗಿ ಎಂಬ ಮನವೊಲಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಸಂಧಾನದ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿಯೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಈ ಬೆಳವಣಿಗೆಯಿಂದ ಬಿಜೆಪಿ ಕೇಂದ್ರ ನಾಯಕರು ಕೆಂಡಾಮಂಡಲವಾಗಿದ್ದಾರೆ.