ಬೆಳಗಾವಿಯ ಅಧಿವೇಶನದ ಕೊನೆಯ ದಿನ ಕಾಂಗ್ರೆಸ್ ಸದಸ್ಯರು ತಮ್ಮ ಕಚೇರಿಗೆ ಮುತ್ತಿಗೆ ಹಾಕಿ ಮಾತನಾಡಿದ ಪದಗಳು ನನಗೆ ಬೇಸರ ತರಿಸಿತ್ತು. ಇದರಿಂದಾಗಿ ನಾನು ರಾಜೀನಾಮೆಗೆ ಮುಂದಾಗಿದ್ದೆ ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.
ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಭಾಪತಿ ಬಸವರಾಜ್ ಹೊರಟ್ಟಿ ಅವರು ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಈ ತರಹದ ಮಾತುಗಳನ್ನು ಎಂದಿಗೂ ಕೇಳಿರಲಿಲ್ಲ. ಆದರೆ ಕಾಂಗ್ರೆಸ್ ಸದಸ್ಯರು ನನ್ನ ತೇಜೋವಧೆಗೆ ಮುಂದಾಗಿದ್ದರು. ನನ್ನನ್ನು ಬಿಜೆಪಿ ಏಜೆಂಟ್ ಎಂದಿದ್ದರು. ಈ ಸಂಗತಿ ಬೇಸರ ತಂದಿತ್ತು. ಹೀಗಾಗಿ ನಾನು ರಾಜೀನಾಮೆಗೆ ಮುಂದಾಗಿದ್ದೆ. ನಂತರ ಕಾಂಗ್ರೆಸ್ ಸದಸ್ಯರ ಪರವಾಗಿ ಪರಿಷತ್‍ನ ವಿರೋಧ ಪಕ್ಷದ ಸಭಾನಾಯಕ ಎಸ್‍ಆರ್ ಪಾಟೀಲ್‍ರು ಕ್ಷಮೆ ಕೇಳಿದ್ದಾರೆ. ಹೀಗಾಗಿ ಪ್ರಕರಣ ಇತ್ಯರ್ಥವಾಗಿದೆ ಎಂದು ಸ್ಪಷ್ಟಪಡಿಸಿದರು.