ಉತ್ತರಕರ್ನಾಟಕದ ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ವೇಳೆ ಉತ್ತರಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇವರು ಅವಕಾಶ ನೀಡೋದಿಲ್ಲ ಎಂದರೆ ಇದು ಉತ್ತರಕರ್ನಾಟಕ ವಿರೋಧಿ ಸರ್ಕಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
10 ದಿನಗಳ ಅಧಿವೇಶನ ಮುಕ್ತಾಯ ಬಳಿಕ ಬೆಳಗಾವಿಯ ಸುವರ್ಣಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿಳಂಬ ಆಗುತ್ತಿರುವ ನೀರಾವರಿ ಯೋಜನೆಗಳು, ಕಲ್ಯಾಣ ಕರ್ನಾಟಕದಲ್ಲಿ ನಡೆಯುತ್ತಿರುವ ಅಭಿವೃದ್ಧಿಗಳ ಬಗ್ಗೆ ಮಾತನಾಡಲು ಅವಕಾಶ ನೀಡುವಂತೆ ನಿನ್ನೆಯೇ ಸ್ಪೀಕರ್‍ಗೆ ಕೇಳಿಕೊಂಡಿದ್ದೆ. ಆದರೆ ನನಗೆ ಅವಕಾಶ ನೀಡದೇ ಪ್ರಶ್ನೋತ್ತರಕ್ಕೆ ಅವಕಾಶ ನೀಡಿದರು. ನಂತರ ಮೂರನಾಲ್ಕು ಆಡಳಿತ ಸದಸ್ಯರಿಗೆ ಮಾತನಾಡು ಅವಕಾಶ ಕೊಟ್ಟರು. ಇದಾದ ಬಳಿಕ ನನಗೆ 45 ನಿಮಿಷ ಮಾತನಾಡಿದೆ. ಈ ಬಗ್ಗೆ ಕೃಷ್ಣಾ ಮೇಲ್ದಂಡೆ, ಮಹದಾಯಿ ಯೋಜನೆ, ಕೊಪ್ಪಳ ಏತ ನೀರಾವರಿ, ಕಲ್ಯಾಣ ಕರ್ನಾಟಕದ 371ಜೆ, ಉದ್ಯೋಗ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಮಾತನಾಡಲು ಅವಕಾಶ ನೀಡಲಿಲ್ಲ. 2 ಗಂಟೆಗೆ ಮುಗಿಸಬೇಕು ಎಂದು ಒತ್ತಡ ಹಾಕಿದರು. ಇದು ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವಕ್ಕೆ ಮಾಡಿದ ಅಪರಾಧ. ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವ ಅಧಿವೇಶನ ವೇಳೆ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಲು ಅವಕಾಶ ನೀಡೋದಿಲ್ಲ ಎಂದರೆ ಇವರು ಉತ್ತರ ಕರ್ನಾಟಕದ ವಿರೋಧಿಗಳು. ಚರ್ಚೆಗೆ ಅವಕಾಶ ನೀಡದೇ ಅಧಿವೇಶನ ಮೊಟಕುಗೊಳಿಸಿದ್ದು ಸಂಸದೀಯ ವ್ಯವಸ್ಥೆಗೆ ಮಾಡಿದ ಅಪಚಾರ, ಪ್ರಜಾಪ್ರಭುತ್ವಕ್ಕೆ ಮಾಡಿರುವ ಅಗೌರವ ಎಂದು ಕಿಡಿಕಾರಿದರು.