ಬೆಳಗಾವಿ, ಡಿ.23- ಕಾಂಗ್ರೆಸ್ ಸರ್ಕಾರದ ಅವಧಿಯ ಕೂಸಿಗೆ ಸ್ವಲ್ಪ ಬದಲಾವಣೆ ಮಾಡಿ ಮತಾಂತರ ನಿಷೇಧ ವಿಧೇಯಕವನ್ನು ತಂದಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರ ಕೂಸಿಗೆ ಸ್ವಲ್ಪ ಮಾರ್ಪಾಡು ಮಾಡಿ ಟಚಪ್ ಕೊಟ್ಟಿದ್ದೇವೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೇ ವಿಧೇಯಕವನ್ನು ಸಿದ್ದಪಡಿಸಲಾಗಿತ್ತು. ಇದೀಗ ಕಾಂಗ್ರೆಸ್‍ನ ಬಣ್ಣ ಬಟ್ಟಬಯಲಾಗಿದೆ ಎಂದು ಟೀಕಿಸಿದರು.
ಹಿಂದೂಗಳನ್ನು ಮತಾಂತರಗೊಳಿಸಲು ಷಡ್ಯಂತ್ರಗೊಳಿಸಲಾಗುತ್ತಿದೆ. ವಿದೇಶದಿಂದಲೂ ಸಾಕಷ್ಟು ಹಣ ಬರುತ್ತದೆ. ಹೀಗಾಗಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ವಿಧೇಯಕಕ್ಕೆ ಸಂಬಂಧಿಸಿದ ಕಡತಕ್ಕೆ ಸಹಿ ಮಾಡಿದ್ದಾರೆ. ಅವರೇ ತಂದಿರುವ ಕೂಸು ಇದು. ಈಗ ಅವರಿಗೇ ಮುಖಭಂಗವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಅಲ್ಪಸಂಖ್ಯಾತರ ಸಭೆಗೆ ಚಾಂಪಿಯನ್ ರೀತಿ ಸಿದ್ದರಾಮಯ್ಯ ಹೋಗುತ್ತಿದ್ದರು. ಈ ವಿಧೇಯಕಕ್ಕೆ ನೀವೇ ಸಹಿ ಮಾಡಿದ್ದೀರಲ್ಲ ಎಂದು ಅವರು ಪ್ರಶ್ನೆ ಮಾಡುತ್ತಾರೆ. ಇವತ್ತು ಸಿದ್ದರಾಮಯ್ಯನವರು ಅಪಹಾಸ್ಯಕ್ಕೀಡಾಗಿದ್ದಾರೆ. ಆದರೂ ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದರು.