ರಾಯಚೂರು: ಜಿಲ್ಲೆಯ ಕೋವಿಡ್ ಆಸ್ಪತ್ರೆ ಓಪೆಕ್ ನಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದ ಹಂದಿಗಳನ್ನ ಕೊನೆಗೂ ಜಿಲ್ಲಾಡಳಿತ ಎಚ್ಚೆತ್ತು ಹಿಡಿದಿದೆ. ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಪಬ್ಲಿಕ್ ಟಿವಿ ವರದಿಯನ್ನ ಪ್ರಸಾರ ಮಾಡಿತ್ತು. ಕೋವಿಡ್ ಸೋಂಕಿತ ರೋಗಿಗಳಿರುವ ವಾರ್ಡ್ ಪಕ್ಕದಲ್ಲೇ ಹಂದಿಗಳು ಬಂದು ಹೋಗುತ್ತಿದ್ದರೂ ನೋಡುವವರಿರಲಿಲ್ಲ. ಇಡೀ ಆಸ್ಪತ್ರೆಯೇ ಹಂದಿಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದ್ದರೂ ಆಸ್ಪತ್ರೆ ಹಿರಿಯ ಅಧಿಕಾರಿಗಳು ತಲೆಕೆಡಿಸಿಕೊಂಡಿರಲಿಲ್ಲ. ಈಗ ಕೊನೆಗೂ ಎಚ್ಚೆತ್ತು ಹಂದಿಗಳನ್ನ ಹಿಡಿಯಲಾಗಿದೆ.
ಹಂದಿಗಳ ಮಾಲೀಕರ ವಿರುದ್ದ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಅಗತ್ಯ ಸ್ಥಳಗಳಲ್ಲಿ ಭದ್ರತೆ ನಿಯೋಜಿಸಲು ಜಿಲ್ಲಾಡಳಿತ ರಿಮ್ಸ್ ನಿರ್ದೇಶಕರಿಗೆ ಸೂಚಿಸಿದೆ. ಇನ್ನೂ ಇಡೀ ಆಸ್ಪತ್ರೆಯಲ್ಲಿ ವಸ್ತುಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರು ನೋಡುವವರಿಲ್ಲ. ಕೆಟ್ಟ ವಾಸನೆ ಬಂದು ರೋಗಿಗಳು ನರಳಾಡುತ್ತಿದ್ದರೂ ಕೇಳುವವರಿಲ್ಲದಂತಾಗಿದೆ.
ಕೋವಿಡ್ ವಾರ್ಡ್ ಗಳಿಗೆ ವೈದ್ಯರ ಭೇಟಿ ಅಪರೂಪವಾಗಿರುವುದರಿಂದ ರೋಗಿಗಳು ಚಿಕಿತ್ಸೆಯಿಲ್ಲದೆ ಪರದಾಡುತ್ತಿದ್ದಾರೆ. ಜೊತೆಗೆ ಮೆಡಿಕಲ್ ತ್ಯಾಜ್ಯವನ್ನ ಪಕ್ಕದಲಲ್ಲೇ ಇರಿಸಲಾಗಿದೆ. ಹಂದಿಗಳು ತ್ಯಾಜ್ಯವನ್ನ ಎಳೆದಾಡಿ ಎಲ್ಲೆಡೆ ಚಲ್ಲಾಪಿಲ್ಲಿ ಮಾಡಿವೆ. ಇಷ್ಟಾದರೂ ಯಾವೊಬ್ಬ ಅಧಿಕಾರಿಯೂ ಇಲ್ಲಿನ ಪರಿಸ್ಥಿತಿ ಸುಧಾರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕೋವಿಡ್ ವಾರ್ಡ್ ನಲ್ಲಿರುವ ರೋಗಿಗಳು ಕೊರೊನಾ ಭೀತಿಗಿಂತ ಇಲ್ಲಿನ ಅವ್ಯವಸ್ಥೆಗೆ ಹೆದರಿದ್ದಾರೆ. ಈಗ ಹಂದಿ ಹಿಡಿಯುವ ಕಾರ್ಯಾಚರಣೆ ನಡೆದಿದ್ದು ಇಡೀ ಆಸ್ಪತ್ರೆಯ ವ್ಯವಸ್ಥೆ ಸುಧಾರಿಸಬೇಕಿದೆ.