ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮೇಲೆ ದಾಳಿ ಮಾಡಿ, ತೊಂದರೆ ಕೊಡಲು ಪ್ರಯತ್ನಿಸಿದ್ದರೋ ಅಂತಹ 25ರಿಂದ 30 ಜನರನ್ನು ಸರ್ಕಾರ ಬಂಧನ ಮಾಡಿದೆ. ಯಾವ ಕಾರಣಕ್ಕೂ ಇಂತವರನ್ನು ಬಿಡಲು ಸಾಧ್ಯವಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಗದಗನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಈಶ್ವರಪ್ಪ ಕನ್ನಡ ಧ್ವಜ ಸುಟ್ಟಿರುವ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಜೊತೆಗೆ ಮಾತುಕತೆ ನಡೆಸಿ ಪುಂಡರ ಬಗ್ಗೆ ಕ್ರಮ ಕೈಗೊಳ್ಳುವಂತೆ ಹೇಳಿದ್ದೇವೆ. ಯಾವುದೇ ಕಾರಣಕ್ಕೂ ನಮ್ಮ ನದಿ, ಭೂಮಿ ಯಾವುದಕ್ಕೂ ರಾಜಿ ಇಲ್ಲ. ನಮ್ಮ ಧ್ವಜ ಮತ್ತು ಮಹಾಪುರುಷರ ಬಗ್ಗೆ ತೊಂದರೆ ಕೊಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಎಂಇಎಸ್ ಬ್ಯಾನ್ ಮಾಡುವ ವಿಚಾರಕ್ಕೆ ಪ್ರತಿಕ್ರಯಿಸಿದ ಸಚಿವ ಈಶ್ವರಪ್ಪ ಬ್ಯಾನ್ ಮಾಡಲು ಎಲ್ಲಿದೆ ಅದು. ಶಕ್ತಿ ಇರುವವರನ್ನು ಬ್ಯಾನ್ ಮಾಡಬೇಕು. ರಾಷ್ಟ್ರದ್ರೋಹಿ ಕೃತ್ಯ ಮಾಡುವ ಎಸ್‍ಡಿಪಿಐನ್ನು ಬ್ಯಾನ್ ಮಾಡಬೇಕು. ಎಂಇಎಸ್‍ನವರಿಗೆ ಬಹಳ ಮಹತ್ವ ಕೊಡುವ ಅವಶ್ಯಕತೆ ಇಲ್ಲ. ಎಂಇಎಸ್ ನಾಯಕರನ್ನು ಒದ್ದು ಒಳಗೆ ಹಾಕಿದ್ದೇವೆ. ಮುಂದೆ ಇದೇ ರೀತಿ ಮುಂದುವರಿದ್ರೆ ಇನ್ನೇನು ಕ್ರಮ ಕೈಗೊಳ್ಳಬೇಕೋ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಇನ್ನು ಕೆಪಿಸಿಸಿ ಅಧ್ಯಕ್ಷ ಎನ್ನುವುದು ಮೈಮೇಲೆ ಜ್ಞಾನ ಇಟ್ಟುಕೊಂಡು ಮಾತನಾಡಬೇಕು. ಎಂಇಎಸ್‍ನವರು ನಮ್ಮವರು ಅಂದರೆ ಏನು ಅರ್ಥ..? ಯಾರು ಈ ರೀತಿ ಗೂಂಡಾಗಿರಿ ಮಾಡುತ್ತಾರೋ ಅವರೆಲ್ಲಾ ಅವರ ಸ್ನೇಹಿತರು. ಡಿಕೆ ಶಿವಕುಮಾರ್ ಇನ್ನೇನು ಎಂದು ಈಶ್ವರಪ್ಪ ತಿರುಗೇಟು ನೀಡಿದರು.