ಬೆಂಗಳೂರು: ಭೂ ಕಬಳಿಕೆ ಆರೋಪ ಎದುರಿಸುತ್ತಿರುವಂತ ಸಚಿವ ಬೈರತಿ ಬಸವರಾಜ ಅವರು ರಾಜೀನಾಮೆ ನೀಡಬೇಕು ಎಂಬುದಾಗಿ ಒತ್ತಾಯಿಸಿ, ವಿಧಾನಸಭೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದ ಕಾರಣ, ಸ್ಪೀಕರ್ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು ಕಲಾಪವನ್ನು ಸೋಮವಾರ ಮಧ್ಯಾಹ್ನ 11 ಗಂಟೆಗೆ ಮುಂದೂಡಿಕೆ ಮಾಡಿದ್ದಾರೆ.
ಇಂದು ಬೆಳಿಗ್ಗೆ ಸದನ ಆರಂಭವಾಗುತ್ತಿದ್ದಂತೆ, ಆರಂಭದಲ್ಲೇ ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಅವರು ಮಾತನಾಡಿ ತಾವು ಉದ್ದೇಶಪೂರ್ವಕವಾಗಿ ಆ ಹೇಳಿಕೆ ನೀಡಿರಲಿಲ್ಲ. ಪ್ರಾಸಂಗಿಕವಾಗಿ ಹೇಳಲಾಗಿತ್ತು. ನನಗೆ ಇದರ ಬಗ್ಗೆ ವಿಷಾದ, ಕ್ಷಮೆ ವ್ಯಕ್ತ ಪಡಿಸೋದಕ್ಕೆ ಯಾವುದೇ ಗೌರವ, ಪ್ರತಿಷ್ಠೆ ಅಡ್ಡಿ ಬರ್ತಾ ಇಲ್ಲ. ನಾನು ಆ ಪದ ಬಳಸಿ ಮಾತನಾಡಿದ್ದು ತಪ್ಪು. ಅದು ಇಂಗ್ಲೀಷ್ ನ ಖ್ಯಾತ ಲೇಖಕರೊಬ್ಬರ ಮಾತನ್ನು ಉಲ್ಲೇಖಿಸಿ ಹೇಳಿದ್ದು ಅಷ್ಟೇ ಎಂದರು.
ಮುಂದುವರೆದು ನನ್ನ ಮಾತನಿಂದ ಮಹಿಳೆಯರಿಗೆ, ಜನತೆಗೆ ಬೇಸರವಾಗಿದೆ ಎಂದೇ ಬಿಂಬಿಸಿಯಾಗಿದೆ. ಈಗ ಈ ಬಗ್ಗೆ ಚರ್ಚೆ ಮಾಡುವ ವಿಚಾರವಲ್ಲ. ಸದನದ ಕಲಾಪ ನೆರೆ, ಜನರ ಪರಿಹಾರ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ನಡೆಯಬೇಕಿದೆ. ಆ ನಿಟ್ಟಿನಲ್ಲಿ ಅನುಕೂಲ ಮಾಡಿಕೊಡಬೇಕಾದದ್ದು ನನ್ನ ಜವಾಬ್ದಾರಿ ಕೂಡ ಆಗಿದೆ. ಆದ್ದರಿಂದ ನನ್ನ ಹೇಳಿಕೆಯ ಬಗ್ಗೆ ಕ್ಷಮೆ ಯಾಚಿಸುತ್ತೇನೆ. ವಿಷಾದ ವ್ಯಕ್ತ ಪಡಿಸುತ್ತೇನೆ ಎಂದರು.
ಈ ಬಳಿಕ ಆರಂಭವಾದಂತ ವಿಧಾನಸಭೆಯ ಕಲಾಪದ ಸಂದರ್ಭದಲ್ಲಿ ಸಚಿವ ಬೈರತಿ ಬಸವರಾಜು ಅವರು ಭೂ ಕಬಳಿಕ ಆರೋಪ ಎದುರಿಸುತ್ತಿದ್ದಾರೆ. ಆ ಬಗ್ಗೆ ಚರ್ಚಿಸೋದಕ್ಕೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಸದಸ್ಯರು ಸದನದ ಭಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಗದ್ದಲದ ನಡುವೆಯೂ ಪೂರಕ ಅಂದಾಜು ಮಂಡನೆಗೆ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಯಿತು.
ನಿಯಮ 60ಡಿ ಅಡಿಯಲ್ಲಿ ಬೈರತಿ ಬಸವರಾಜ ಆರೋಪ ಕುರಿತಂತೆ ಚರ್ಚೆಗೆ ಅವಕಾಶ ನೀಡಲು ಕಾಂಗ್ರೆಸ್ ಪ್ರತಿಭಟಿಸಿದಂತ ಸಂದರ್ಭದಲ್ಲಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಪ್ರಕರಣ ಕೋರ್ಟ್ ನಲ್ಲಿದೆ. ಅದರ ಬಗ್ಗೆ ಚರ್ಚೆಗೆ ಅವಕಾಶ ನೀಡಲು ಆಗೋದಿಲ್ಲ ಎಂದಾಗಿ ಕಾಂಗ್ರೆಸ್ ಪ್ರತಿಭಟನೆ, ಗದ್ದಲ್ಲ ಮತ್ತಷ್ಟು ಏಳಿಸಿದ ಕಾರಣ, ಕಲಾಪವನ್ನು ಸೋಮವಾರ ಬೆಳಿಗ್ಗೆ 11 ಗಂಟೆಗೆ ಮುಂದೂಡಿದರು.