ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ವಿಚಾರವಾಗಿ ಮಾತನಾಡಿರುವ ಕರ್ನಾಟಕ ರಾಜ್ಯ ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ, ಡಿ. ಕೆಂಪಣ್ಣ, ನಮ್ಮ ಸಮಸ್ಯೆಗಳ ಬಗ್ಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಪತ್ರ ಬರೆದು ತಿಳಿಸಿದರೂ ಸ್ಪಂದಿಸಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆಂಪಣ್ಣ, ಯಾವುದೇ ಕಾಮಗಾರಿ ಮಾಡಬೇಕಾದರೂ 40 ಪರ್ಸೆಂಟ್ ಕಮಿಷನ್ ಕೊಡಬೇಕಾಗುತ್ತದೆ. ಅದಕ್ಕಾಗಿ ಈ ಹಿಂದೆ ಯಡಿಯೂರಪ್ಪಗೆ ನಾವು ಪತ್ರ ಬರೆದಿದ್ದೆವು. ಆದರೆ ಯಡಿಯೂರಪ್ಪನವರು ಸರಿಯಾಗಿ ಸ್ಪಂದಿಸಿಲ್ಲ. ಪ್ರಧಾನಿ ಮೋದಿಯವರಿಗೂ ಪತ್ರ ಬರೆಯಲಾಯಿತು. ಆದರೂ ಯಾವುದೇ ಉತ್ತರ ಬಂದಿಲ್ಲ. ಸಿಎಂ ಬದಲಾಗಿ ಬಸವರಾಜ್ ಬೊಮ್ಮಾಯಿ ಅಧಿಕಾರಕ್ಕೆ ಬಂದರು. ಈಗಲೂ ಯಾವುದೇ ಸ್ಪಂದನೆ ಇಲ್ಲ…ರಾಜ್ಯಪಾಲರ ಬಳಿ, ಲೋಕೋಪಯೋಗಿ ಸಚಿವರ ಬಳಿಯೂ ಹೋದೆವು ಆದರೂ ಸಮಸ್ಯೆ ಆಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ಯಾಕೇಜ್ ಸಿಸ್ಟಮ್ ತಂದಿರುವುದರಿಂದ ಲೋಕಲ್ ಕಾಂಟ್ರಾಕ್ಟರ್ ಗೆ ಯಾವುದೇ ಕೆಲಸ ಸಿಗುತ್ತಿಲ್ಲ. ಸಿಎಂ ನಮಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಯಾರು ಎಲ್ಲಿ ಎಷ್ಟು ಪ್ರಮಾಣದಲ್ಲಿ ಕಮಿಷನ್ ಕಲೆಕ್ಟ್ ಮಾಡುತ್ತಿದ್ದರು ಎಂಬುದನ್ನು ಹೇಳಲು ನಾವು ಸಿದ್ಧ. ಇದರಲ್ಲಿ ಅಧಿಕಾರಿಗಳು ಕೂಡ ಇದ್ದಾರೆ. ಸರ್ಕಾರ ನಮ್ಮ ಮಾತನ್ನು ಕೇಳಬೇಕು. ಇಲ್ಲವಾದಲ್ಲಿ ಜನವರಿಯಲ್ಲಿ ಬೃಹತ್ ಹೋರಾಟಕ್ಕೆ ನಿರ್ಧಸಿದ್ದೇವೆ ಎಂದರು.