ಬೆಂಗಳೂರು: ಇಂದು ಗಣೇಶ ಚತುರ್ಥಿ ಹಿನ್ನೆಲೆ ದೇಶದೆಲ್ಲೆಡೆ ವಿಘ್ನ ವಿನಾಯಕನಿಗೆ ಪೂಜೆ ಪುನಸ್ಕಾರಗಳು ನಡೆದಿವೆ. ಜನರು ಗಣೇಶನ ವಿಗ್ರಹ ತಂದು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ವಿಘ್ನಗಳನ್ನು ನಿವಾರಿಸುವ ಎಂದು ಪ್ರಾರ್ಥಿಸುತ್ತಿದ್ದಾರೆ. ಕೊರೊನಾ ಗಣೇಶ ಹಬ್ಬದ ಅರ್ಧಕ್ಕಿಂತ ಹೆಚ್ಚು ಸಂಭ್ರಮವನ್ನು ಕಿತ್ತುಕೊಂಡಿದೆ. ಕೊರೊನಾ ಹಿನ್ನೆಲೆ ಭಕ್ತಾದಿಗಳು ಸರಳವಾಗಿ ಗಣೇಶ ಹಬ್ಬವನ್ನ ಆಚರಿಸುತ್ತಿದ್ದಾರೆ.
ದೇವಸ್ಥಾನಗಳು ತೆರೆದಿದ್ರೂ ಭಕ್ತರ ಸಂಖ್ಯೆ ಅಷ್ಟಿಲ್ಲ. ಹಬ್ಬದ ದಿನಗಳಲ್ಲಿ ಭಕ್ತರಿಂದ ತುಂಬಿರುತ್ತಿದ್ದ ದೇವಸ್ಥಾನಗಳು ಖಾಲಿ ಖಾಲಿ ಅನ್ನಿಸುತ್ತಿವೆ. ಕೊರೊನಾ ಆತಂಕದಿಂದ ಜನ ಮನೆಗಳಲ್ಲಿ ಗಜಮುಖನಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಸರ್ಕಾರ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಹಲವು ಷರತ್ತುಗಳನ್ನ ವಿಧಿಸಿದೆ.
ಗೌರಿ ಗಣೇಶ ಹಬ್ಬದ ಹಿನ್ನೆಲೆ ಮಾರುಕಟ್ಟೆಗಳಲ್ಲಿ ಜನ ಸಾಮಾಜಿಕ ಅಂತರ ಮರೆತು ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ. ಅನ್‍ಲಾಕ್ ನಂತರ ಸಾರ್ವಜನಿಕರು ಕೊರೊನಾ ಇರೋದು ಮರೆತಿರುವಂತೆ ಕಾಣಿಸುತ್ತಿದೆ. ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಿದ್ದರೂ ಜನ ಮಾತ್ರ ಮಾರುಕಟ್ಟೆಯಲ್ಲಿ ಖರೀದಿ ನಡೆಸುತ್ತಿದ್ದಾರೆ.