ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದೊಂದು ವಾರದಿಂದ ಬಿಡುವು ನೀಡಿದ್ದ ಮಳೆರಾಯ, ಇಂದು ಬೆಳಗ್ಗೆಯಿಂದ ಮತ್ತೆ ಶುರುವಿಟ್ಟಿದ್ದಾನೆ. ವಾರದ ನಂತರ ಇದ್ದಕ್ಕಿದ್ದಂತೆ ಮಳೆಯಾಗಿರುವುದು ಜನರನ್ನು ಪರದಾಡುವಂತೆ ಮಾಡಿದೆ. ಇದು ಗೌರಿ ಹಬ್ಬಕ್ಕೂ ತಟ್ಟಿದ್ದು, ಮಹಿಳೆಯರು ಮಳೆಯನ್ನೂ ಲೆಕ್ಕಿಸದೆ ಪೂಜೆ ನೆರವೇರಿಸಿದ್ದಾರೆ.ಜಿಲ್ಲಾದ್ಯಂತ ಮೋಡಕವಿದ ವಾತಾವರಣವಿದ್ದು, ಹಲವೆಡೆ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ. ಸುರಿಯುತ್ತಿರೋ ಮಳೆಯಲ್ಲೇ ಗೌರಿ ಹಬ್ಬಕ್ಕೆ ಮುಂದಾಗಿರೋ ಮಲೆನಾಡಿಗರು, ವರುಣನ ಅಬ್ಬರದ ನಡುವೆಯೇ ಗೌರಿಯನ್ನು ಪೂಜೆ ಮಾಡಿ ಮನೆಗೆ ಬರಮಾಡಿಕೊಂಡಿದ್ದಾರೆ
ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್, ಬಾಳೂರು, ಬಣಕಲ್, ದಾರದಹಳ್ಳಿ ಭಾಗದಲ್ಲಿ ಭಾರೀ ಮಳೆಯಾಗಿದ್ದು, ಕೊರೊನಾ ನಡುವಿನ ಗೌರಿ ಹಬ್ಬಕ್ಕೆ ವರುಣ ಸಹ ಅಡ್ಡಿಪಡಿಸಿದಂತಾಗಿದೆ. ಭಾರೀ ಮಳೆಯಿಂದ ಮೂಡಿಗೆರೆ ತಾಲೂಕಿನ ಹಲವು ಭಾಗಗಳಲ್ಲಿ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಇಷ್ಟಾದರೂ ಮಹಿಳೆಯರು ಗೌರಿ ಪೂಜೆ ನೆರವೇರಿಸಿ ಮನೆಗೆ ಬರಮಾಡಿಕೊಂಡಿದ್ದಾರೆ.
ಆಗಸ್ಟ್ ಮೊದಲ ವಾರದಲ್ಲಿ ಸುರಿದ ಒಂದೇ ವಾರದ ಮಳೆಯ ಅವಾಂತರಗಳಿಂದ ಜನ ರೋಸಿ ಹೋಗಿದ್ದಾರೆ. ಅಲ್ಲದೆ ಕಳೆದ ವರ್ಷದ ಮಳೆಯಿಂದಾದ ಹಾನಿ ಸಹ ಇನ್ನೂ ಸರಿ ಆಗಿಲ್ಲ. ಹೀಗಿರುವಾಗ ಈಗ ಮತ್ತೆ ಮಳೆ ಶುರುವಾಗಿದೆ. ಹೀಗಾಗಿ ಜನರಲ್ಲಿ ಭಯ ಆವರಿಸಿದೆ.