ಬೆಳಗಾವಿ – ಡಿಸೆಂಬರ್ 10ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ಧ. ಬಿಜೆಪಿಯಂತೆ ಕಾಂಗ್ರೆಸ್ ನಲ್ಲಿ ಯಾವುದೇ ಗೊಂದಲವಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ತಿಳಿಸಿದರು.
ಹಿರೇಬಾಗೇವಾಡಿ ಮತ್ತು ಹಲಗಾ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅವರು ಪಂಚಾಯಿತಿ ಸದಸ್ಯರ ಮತಯಾಚನೆ ಮಾಡುತ್ತಿದ್ದರು. ಹೆಸರಿಗೆ ಪಕ್ಷೇತರ ಎಂದು ಹೇಳಿದರೂ ಬಿಜೆಪಿಯಲ್ಲಿ ಇಬ್ಬರು ಅಭ್ಯರ್ಥಿಗಳಿದ್ದಾರೆ. ಅವರಲ್ಲಿ ಮೊದಲ ಪ್ರಾಶಸ್ತ್ಯದ ಮತವನ್ನು ಯಾರಿಗೆ ನೀಡಬೇಕು, ಎರಡನೆ ಪ್ರಾಶಸ್ತ್ಯದ ಮತವನ್ನು ಯಾರಿಗೆ ನೀಡಬೇಕು ಎನ್ನುವ ಗೊಂದಲ ಇನ್ನೂ ಮುಗಿದಿಲ್ಲ. ಕೆಲವರು ಒಬ್ಬರ ಹೆಸರು ಹೇಳಿದರೆ, ಮತ್ತೆ ಕೆಲವರು ಇನ್ನೊಬ್ಬರ ಹೆಸರು ಹೇಳುತ್ತಿದ್ದಾರೆ. ಯಾರಲ್ಲೂ ಸ್ಪಷ್ಟತೆ ಇಲ್ಲ. ಹೈಕಮಾಂಡ್ ಇನ್ನೂ ಯಾರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಬೇಕೆಂದು ತಿಳಿಸಿಲ್ಲ, ಹೈಕಮಾಂಡ್ ಸೂಚನೆಗೆ ಕಾಯುತ್ತಿದ್ದೇವೆ ಎಂದು ಇನ್ನೂ ಕೆಲವರು ಹೇಳುತ್ತಿದ್ದಾರೆ. ಹಾಗಾಗಿ ಪಂಚಾಯಿತಿ ಸದಸ್ಯರು ಗೊಂದಲಕ್ಕೆ ಒಳಗಾಗದೆ ಮೊದಲ ಸ್ಥಾನದಲ್ಲಿರುವ ನನ್ನ ಹೆಸರಿನ ಮುಂದೆ 1 ಎಂದು ಬರೆಯುವ ಮೂಲಕ ಮೊದಲ ಪ್ರಾಶಸ್ತ್ಯದ ಮತ ನೀಡಬೇಕು ಎಂದು ಚನ್ನರಾಜ ಹಟ್ಟಿಹೊಳಿ ತಿಳಿಸಿದರು.
ಬಿಜೆಪಿಯಲ್ಲಿ ಮತಗಳು ವಿಭಜನೆಯಾಗಲಿವೆ. ಇರುವ ಮತಗಳಲ್ಲಿ ಇಬ್ಬರಿಗೆ ಹಂಚಿಹೊಗಲಿದೆ. ಆದರೆ ಕಾಂಗ್ರೆಸ್ ಮತಗಳು ಗಟ್ಟಿಯಾಗಿವೆ. ನಮ್ಮ ಸದಸ್ಯರು ಬೇರೆಯವರ ಆಸೆ, ಆಮಿಷಗಳಿಗೆ ಬಲಿಯಾಗುವ ಪ್ರಶ್ನೆಯೇ ಇಲ್ಲ.