ಕುಷ್ಟಗಿ: ನಿಲ್ಲಿಸಿದ್ದ ರೈತರ ಟ್ರ್ಯಾಕ್ಟರ್ ಟ್ರಾಲಿ ಗಳನ್ನು ಕದ್ದು, ಮಾರುತ್ತಿದ್ದ ಟ್ರಾಲಿ ಸ್ಪೆಷಲಿಸ್ಟ್ ಕಳ್ಳರ ಗ್ಯಾಂಗನ್ನು ಕುಷ್ಟಗಿ ಪೊಲೀಸರು ಬಂಧಿಸಿದ್ದು, ಮೂರು ಟ್ರ್ಯಾಕ್ಟರ್ ಟ್ರಾಲಿ ವಶಪಡಿಸಿಕೊಂಡಿದ್ದಾರೆ.
ಕಳೆದ ನ.26ರಂದು ಸಂಗನಾಳ ಗ್ರಾಮದ ಮುದಕನಗೌಡ ಭರಮಗೌಡ ಗೌಡ್ರು ಅವರು, ಗ್ರಾಮದ ನಿರುಪಾದೇಶ್ವರ ಮಠದ ಜಾಗದಲ್ಲಿ ನಿಲ್ಲಿಸಿದ್ದ ಟ್ರಾಲಿ ಕಳುವಾಗಿರುವ ಬಗ್ಗೆ ದೂರು ನೀಡಿದ್ದರು.
ತಾವರಗೇರಾ ಪಿಎಸೈ ವೈಶಾಲಿ ಝಳಕಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ನ.28ರಂದು ನಾಲ್ವರು ಸ್ಪೆಷಲಿಸ್ಟ್ ಕಳ್ಳರು ಟ್ರಾಲಿ ತೆಗೆದುಕೊಂಡು ಹೋಗುವಾಗ ಪೊಲೀಸರು ತಡೆದು ವಿಚಾರಣೆಗೆ ಒಳಪಡಿಸಿದಾಗ ಕಲಮಂಗಿ, ನವಲಿ ಗ್ರಾಮದಲ್ಲಿ ಟ್ರಾಲಿ ಕಳುಮಾಡಿರುವುದು ಗೊತ್ತಾಗಿದೆ.
ಎರಡು ಟ್ರಾಲಿಗಳನ್ನು ಕನ್ನಾಳದಲ್ಲಿ ಅಡಗಿಸಿದ್ದರು. ಈ ಹಿನ್ನೆಲೆಯಲ್ಲಿ ಟ್ರಾಲಿ ಸ್ಪೆಷಲಿಸ್ಟ್ ಕಳ್ಳರಾದ ಸಿಂಧನೂರು ತಾಲೂಕಿನ ಕಲಮಂಗಿಯ ವಿರುಪಣ್ಣ ಬಸನಗೌಡ ಹೇರೂರು, ಕಾರಟಗಿ ತಾಲೂಕಿನ ಮೈಲಾಪೂರ ಗ್ರಾಮದ ಮಹಿಬೂಬು ಹಸನಸಾಬ್, ಇದೇ ಗ್ರಾಮದ ಸಿದ್ದಲಿಂಗ ನಾಗಪ್ಪ ಆಕಳಕುಂಪಿ, ಸಂಗನಾಳ ಗ್ರಾಮದ ಯಮನೂರ ರಾಮಣ್ಣ ಕೊಳಬಾಳ ಎನ್ನುವವರನ್ನು ಬಂಧಿಸಲಾಗಿದೆ.
ಬಂಧಿತರಿಂದ ನಾಲ್ಕು ವಶಪಡಿಸಿಕೊಳ್ಳಲಾದ ಟ್ರಾಲಿಗಳ ಮೌಲ್ಯ 4.20 ಲಕ್ಷ ರೂ ಅಂದಾಜಿಸಲಾಗಿದೆ. ಪ್ರಕರಣ ದಾಖಲಿಸಿ ಎರಡೇ ದಿನಗಳ ಪೊಲೀಸ್ ಕಾರ್ಯಾಚರಣೆಯಲ್ಲಿ ಕಳ್ಳರನ್ನು ಪತ್ತೆ ಹಚ್ಚಿದ ಪೊಲೀಸ ತಂಡಕ್ಕೆ ಎಸ್ಪಿ ಟಿ.ಶ್ರೀಧರ, ಡಿ.ವೈ.ಎಸ್ಪಿ ರುದ್ರೇಶ ಉಜ್ಜನಕೊಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ಕನಕಗಿರಿ ತಾಲೂಕಿನ ಸಂಕನಾಳ ಬೋಗೇಶ ದುರಗಪ್ಪ ತಳವಾರ ತಲೆಮರೆಸಿಕೊಂಡಿದ್ದಾನೆ. ಈತನ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮಾಹಿತಿ ನೀಡಿದರು.