ಹೊಸದಿಲ್ಲಿ: “ನ್ಯಾಯಾಂಗ ನಿಂದನೆಗಾಗಿ ನನ್ನನ್ನು ಅಪರಾಧಿ ಎಂದು ಘೋಷಿಸಿರುವುದು ನನಗೆ ನೋವು ತಂದಿದೆ. ನನಗೆ ದೊರೆಯಬಹುದಾದ ಶಿಕ್ಷೆಯ ಕುರಿತಂತೆ ನನಗೆ ನೋವಿಲ್ಲ. ಆದರೆ ನನ್ನನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಲಾಗಿದೆ ಎಂಬುದಕ್ಕೆ ನೋವಿದೆ. ಪ್ರಜಾಪ್ರಭುತ್ವ ಮತ್ತದರ ಮೌಲ್ಯಗಳನ್ನು ರಕ್ಷಿಸಲು ಬಹಿರಂಗ ಟೀಕೆ ಅಗತ್ಯವಿದೆ ಎಂದು ನಾನು ನಂಬಿದ್ದೇನೆ” ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಇಂದು ಸುಪ್ರೀಂ ಕೋರ್ಟ್ ನ ಮುಂದೆ ಹೇಳಿದ್ದಾರೆ.
https://youtu.be/gSlF434lvWE
“ಸಂಸ್ಥೆ ಇನ್ನೂ ಉತ್ತಮವಾಗಿ ಕಾರ್ಯಾಚರಿಸುವಂತಾಗಲು ನಾನು ನಡೆಸುತ್ತಿರುವ ಯತ್ನ ಎಂದು ನನ್ನ ಟ್ವೀಟ್ ಗಳನ್ನು ಪರಿಗಣಿಸಬೇಕು. ಆ ಟ್ವೀಟ್ ಗಳ ಮುಖಾಂತರ ನಾನು ನನ್ನ ಅತ್ಯುನ್ನತ ಕರ್ತವ್ಯವನ್ನು ನಿಭಾಯಿಸಿದ್ದೇನೆ. ಅದಕ್ಕಾಗಿ ಕ್ಷಮೆ ಕೋರುವುದು ಕೂಡ ಕರ್ತವ್ಯಲೋಪವಾಗಬಹುದು. ಕ್ಷಮಾದಾನವನ್ನು ನಾನು ಕೇಳುವುದಿಲ್ಲ, ವಿಶಾಲ ಹೃದಯ ಹೊಂದಬೇಕೆಂದೂ ಅಪೀಲು ಮಾಡುವುದಿಲ್ಲ. ನ್ಯಾಯಾಲಯ ಯಾವುದೇ ಶಿಕ್ಷೆ ನೀಡಿದರೂ ಅದನ್ನು ಒಪ್ಪಿಕೊಳ್ಳುತ್ತೇನೆ” ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಸ್ಟಿಸ್ ಅರುಣ್ ಮಿಶ್ರಾ, “ಪ್ರತಿಯೊಂದಕ್ಕೂ ಲಕ್ಷಣ ರೇಖೆಯೆಂಬುದಿದೆ. ಅದನ್ನೇಕೆ ದಾಟಬೇಕು?, ಉತ್ತಮ ಪ್ರಕರಣಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೆತ್ತಿಕೊಳ್ಳುವುದನ್ನು ನಾನು ಸ್ವಾಗತಿಸುತ್ತೇನೆ, ಆದರೆ ನೆನಪಿಡಿ, ಇದು ತೀರ್ಪು ನೀಡಿದ ನಂತರ. ಇದೊಂದು ಗಂಭೀರ ವಿಚಾರ. ನ್ಯಾಯಾಧೀಶನಾಗಿ ನನ್ನ 24 ವರ್ಷದ ಸೇವೆಯಲ್ಲಿ ನ್ಯಾಯಾಂಗ ನಿಂದನೆಗಾಗಿ ಯಾರನ್ನೂ ದೋಷಿಯೆಂದು ಘೋಷಿಸಿಲ್ಲ, ಇದು ನನ್ನ ಮೊದಲ ಅಂತಹ ತೀರ್ಪು” ಎಂದು ಹೇಳಿದರು.
“ನಿಮ್ಮ ಪರಿಶೀಲನಾ ಅರ್ಜಿಯ ಕುರಿತು ತೀರ್ಮಾನ ಕೈಗೊಳ್ಳುವ ತನಕ ನಿಮಗೆ ಯಾವುದೇ ಶಿಕ್ಷೆ ನೀಡಲಾಗುವುದಿಲ್ಲ ಎಂದು ಭರವಸೆ ನೀಡುತ್ತೇವೆ” ಎಂದು ಹೇಳಿದ ಕೋರ್ಟ್ ಶಿಕ್ಷೆಯ ಪ್ರಮಾಣ ಕುರಿತಂತೆ ತಮ್ಮ ವಾದವನ್ನು ಇನ್ನೊಂದು ಪೀಠ ಆಲಿಸಬೇಕೆಂಬ ಭೂಷಣ್ ಅಪೀಲನ್ನು ತಿರಸ್ಕರಿಸಿದೆ.
ನ್ಯಾಯಾಂಗ ನಿಂದನೆ ಪ್ರಕರಣದ ವಿರುದ್ಧ ಪರಿಶೀಲನಾ ಅರ್ಜಿ ಸಲ್ಲಿಸಲು ಉದ್ದೇಶಿಸಿರುವ ಭೂಷಣ್ ತಮ್ಮ ಅರ್ಜಿಯನ್ನು ತೀರ್ಮಾನಿಸುವವರೆಗೆ ವಿಚಾರಣೆಯನ್ನು ಮುಂದೂಡಬೇಕೆಂದು ನ್ಯಾಯಾಲಯವನ್ನು ಒತ್ತಾಯಿಸಿದ್ದರು