ಕಲಬುರ್ಗಿ: ಕಲಬುರಗಿ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ದೆಹಲಿ ಮೂಲದ ಯುವತಿಯೊಬ್ಬಳು ಸಿಎಂ ಬಸವರಾಜ್ ಬೊಮ್ಮಾಯಿಗೆ ದೂರು ನೀಡಿದ್ದಾಳೆ.
ಸಾಮಾಜಿಕ ಜಾಲತಾಣಗಳ ಮೂಲಕ ಯುವತಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ದೂರು ನೀಡಿದ್ದು, ಯುವತಿಯ ಪತ್ರ ವೈರಲ್ ಆಗಿದೆ. ಆದರೆ ಈ ಬಗ್ಗೆ ಯುವತಿ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿಲ್ಲ.
ಕಲಬುರ್ಗಿ ಆಯುಕ್ತ ಸ್ನೇಹಲ್ ಹಾಗೂ ಯುವತಿ ನಡುವಿನ ವಾಟ್ಸಪ್ ಚಾಟಿಂಗ್, ಆಯುಕ್ತರ ಶರ್ಟ್ ಲೆಸ್ ಫೋಟೋ ಕೂಡ ವೈರಲ್ ಆಗಿದೆ.
ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಆಯುಕ್ತ ಸ್ನೇಹಲ್, ನನ್ನ ವಿರುದ್ಧ ಆರೋಪಿಸಿರುವ ಯುವತಿ ಯಾರೆಂದು ನನಗೆ ಗೊತ್ತಿಲ್ಲ. ಈ ಬಗ್ಗೆ ಪೊಲೀಸರಿಗೂ ನಾನು ದೂರು ನೀಡಿದ್ದೇನೆ. ನನ್ನ ಹೆಸರು ಕೆಡಿಸಲು ಈ ರೀತಿಯಾಗಿ ಮಡುತ್ತಿದ್ದಾರೆ. ಯುವತಿ ಜೊತೆ ನಾನು ಯಾವುದೇ ಚಾಟಿಂಗ್ ಮಾಡಿಲ್ಲ. ಫೋಟೋ ಚಾಟಿಂಗ್ ಬಗ್ಗೆಯೂ ಗೊತ್ತಿಲ್ಲ. ನಾನು ಮಾನನಷ್ಟ ಮೊಕದ್ದಮೆ ಹಾಕುತ್ತೇನೆ. ಫೋಟೋ ಎಲ್ಲಿಂದ ತೆಗೆದುಕೊಂಡರು ಎಂಬುದೂ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ಯುವತಿ ಹಾಗೂ ಪಾಲಕರು ಕಲಬುರಗಿ ಪೊಲೀಸ್ ಆಯುಕ್ತರಿಗೂ ಈ ಕುರಿತು ಮಾಹಿತಿ ನೀಡಿದ್ದಾರೆ. ಆದರೆ ಅಲ್ಲಿ ಲಿಖಿತ ದೂರು ನೀಡಿಲ್ಲ. ಘಟನೆ ದೆಹಲಿಯಲ್ಲಾಗಿರುವುದರಿಂದ ದೆಹಲಿಯಲ್ಲೇ ದೂರು ನೀಡಬೇಕು ಎಂದು ಪೊಲೀಸರು ಯುವತಿಗೆ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.