ಗೋಕಾಕ್ : ಗೋಕಾಕ ತಾಲ್ಲೂಕಿನ ಗುಜನಾಳ ಮತಗಟ್ಟೆಗೆ ನಾನೇ ಬೂತ್ ಮಟ್ಟದ ಏಜೆಂಟರಾಗಿ ಕಾರ್ಯ ನಿರ್ವಹಿಸುತ್ತೇನೆಂದು ಸ್ವತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಘೋಷಿಸಿದ್ದಾರೆ.
ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಗೋಕಾಕ ಹಿಲ್ ಗಾರ್ಡನ್ ಕಚೇರಿಯಲ್ಲಿ ಶನಿವಾರ ಬೂತ್ ಮಟ್ಟದ ಏಜೆಂಟರುಗಳ ಆಯ್ಕೆ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಗ್ಗೆ ತಿಳಿಸಿದ್ದಾರೆ.
ಗುಜನಾಳ ಮತಗಟ್ಟೆಯಲ್ಲಿ ಪ್ರತಿ ಬಾರಿಯೂ ರಮೇಶ್ ಜಾರಕಿಹೊಳಿ ಬೆಂಬಲಿಗರ ಪ್ರಭಾವ ಹೆಚ್ಚಾಗಿರುತ್ತದೆ. ಈ ಕಾರಣದಿಂದ ಸತೀಶ್ ಅವರು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಆಪ್ತ ಮೂಲಗಳಿಂದ ತಿಳಿದು ಬಂದಿದೆ . ಇದುವರೆಗೂ ಯಾವ ಶಾಸಕರು ಏಜೆಂಟರುಗಳಾಗಿ ಕಾರ್ಯನಿರ್ವಹಿಸಿದ ಉದಾಹರಣೆಗಳಿಲ್ಲ. ಸತೀಶ್ ಅವರು ಚುನಾವಣೆ ಏಜೆಂಟ್ ಆಗಿ ಘೋಷಿಸಿರುವುದು ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ.
ವಿಧಾನಪರಿಷತ್ ಚುನಾವಣೆ ಗೆಲುವಿಗಾಗಿ ಒಂದು ಹೊಸ ಪ್ರಯೋಗವನ್ನು ಮಾಡಲಾಗಿದೆ. ನಾವು ಗೆಲ್ಲಬೇಕಾಗಿದೆ. ಆದ್ದರಿಂದ ಗೆಲ್ಲಲಿಕ್ಕೆ ಏಜೆಂಟ್ ಆಗಲಿದ್ದೇನೆ, ಕ್ಲರ್ಕ್ ಕೂಡಾ ಆಗಲಿಕ್ಕೆ ಸಿದ್ದವಿದ್ದೇನೆ ಎಂದಿದ್ದಾರೆ.
ಗೋಕಾಕ ಹಾಗೂ ಅರಬಾವಿ ಮತಕ್ಷೇತ್ರದಲ್ಲಿ ತಲಾ 30% ಮತಗಳು ಬರಲಿವೆ. ಈಗಾಗಲೇ ಗ್ರಾಮ ಪಂಚಾಯ್ತಿಗಳಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಇದ್ದಾರೆ. ಅವರಿಗೆ ತಿಳುವಳಿಕೆ ಹೇಳಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಪರ ಮತ ಹಾಕಲಿಕ್ಕೆ ಮನವಿ ಮಾಡುವುದೊಂದೆ ಕೆಲಸವಾಗಿದೆ. ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.
Laxmi News 24×7