ತುಮಕೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮನ್ನು 10 ಪರ್ಸೆಂಟ್ ಸರ್ಕಾರ ಎನ್ನುತ್ತಿದ್ದರು. ಈಗ ರಾಜ್ಯದಲ್ಲಿ 40 ಪರ್ಸೆಂಟ್ ಸರ್ಕಾರ ಆಡಳಿತ ನಡೆಸುತ್ತಿದೆ’ ಎಂದು ಕಾಂಗ್ರೆಸ್ ಮುಖಂಡರು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನೇತೃತ್ವದ ಸರ್ಕಾರ ಈವರೆಗೆ ದೇಶದಲ್ಲಿ ಜಾರಿಗೊಳಿಸಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸುವ ಸಲುವಾಗಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಜನಜಾಗೃತಿ ಅಭಿಯಾನಕ್ಕೆ ತುಮಕೂರಿನಲ್ಲಿ ಭಾನುವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು.
‘ಅಭಿವೃದ್ಧಿ ಕಾಮಗಾರಿಗಳಲ್ಲಿ ಶೇ 35ರಿಂದ 40ರಷ್ಟು ಲಂಚ ಕೊಡಬೇಕಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಪ್ರಧಾನಿ ಬಾಯಿ ಬಿಡುತ್ತಿಲ್ಲ. ಬಿಜೆಪಿಯವರ ಭ್ರಷ್ಟಾಚಾರ ಬಿಚ್ಚಿಟ್ಟು, ಬೆತ್ತಲೆ ನಿಲ್ಲಿಸಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮಾನ, ಮರ್ಯಾದೆ ಇದ್ದರೆ ತಕ್ಷಣ ಕ್ರಮ ಕೈಗೊಳ್ಳಬೇಕಿತ್ತು’ ಎಂದು ಸಿದ್ದರಾಮಯ್ಯ ಹೇಳಿದರು
ಡಿ.ಕೆ.ಶಿವಕುಮಾರ್, ‘ರಾಜ್ಯದಲ್ಲಿ ಟೆಂಡರ್ ಕಾಂಚಾಣ ಕುಣಿಯುತ್ತಿದೆ. ಗುತ್ತಿಗೆದಾರರು ಶೇ 58ರಷ್ಟು
ಕಮಿಷನ್ ಕೊಡಬೇಕಾಗಿದೆ. ಬಿಜೆಪಿಯವರ ಭ್ರಷ್ಟಾಚಾರ ಬೀದಿಗೆ ಬಂದಿದ್ದರೂ ಪ್ರಧಾನಿ, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಬಾಯಿ ಬಿಡುತ್ತಿಲ್ಲ. ಈ ಬಗ್ಗೆ ಜನತೆಗೆ ಉತ್ತರ ಕೊಡಬೇಕು’ ಎಂದು ‘ಪ್ರಜಾವಾಣಿ’ಯಲ್ಲಿ ಬಂದಿದ್ದ ವರದಿಯನ್ನು ತೋರಿಸಿ ಆಗ್ರಹಿಸಿದರು.