ನವೆಂಬರ್ 23ರಂದು ಚನ್ನರಾಜ್ ಹಟ್ಟಿಹೊಳಿ ನಾಮಪತ್ರ ಸಲ್ಲಿಸಲಿದ್ದಾರೆ. ಚುನಾವಣೆಯನ್ನು ಕಾರ್ಯಾಧ್ಯಕ್ಷರು, ನಮ್ಮ ನಾಯಕರಾದ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿಯೇ ಮಾಡುತ್ತೇವೆ. ಅವರ ಜವಾಬ್ದಾರಿ ತಗೊಂಡ ಮೇಲೆಯೇ ಟಿಕೆಟ್ ಘೋಷಣೆ ಆಗಿದೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಎಂಎಲ್‍ಸಿ ಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಕುಟುಂಬ ರಾಜಕಾರಣ ಮಾಡುವುದಿಲ್ಲವೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಬೆಳಗಾವಿಯಲ್ಲಿ ಪ್ರತಿಕ್ರಯಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಸತೀಶ ಜಾರಕಿಹೊಳಿ ಭವಿಷ್ಯ ಕಟ್ಟಿಕೊಂಡವರು. ಮುಂದಿನ ದಿನದಲ್ಲಿ ನಮ್ಮ ಪಕ್ಷದ ಉಜ್ವಲ ಸ್ಥಾನ ಏರುವ ಓರ್ವ ನಾಯಕರು. ತಮ್ಮ ಭವಿಷ್ಯವನ್ನು ಇಲ್ಲಿ ಗಟ್ಟಿ ಗೊಳಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಕುಟುಂಬ ರಾಜಕಾರಣದಲ್ಲಿ ಸತೀಶ ಜಾರಕಿಹೊಳಿ ಅವರು ಇದ್ದಾರೆ ಎಂದು ನನಗೆ ಅನಿಸುವುದಿಲ್ಲ ಎಂದರು.
ಇನ್ನು ಯಾವುದೇ ನಾಯಕರ ಟಿಕೆಟ್‍ನ್ನು ತಪ್ಪಿಸಿ ನಾವು ಟಿಕೆಟ್‍ನ್ನು ತೆಗೆದುಕೊಂಡಿಲ್ಲ. ಎಲ್ಲ ನಾಯಕರ ಮಾರ್ಗದರ್ಶನದಲ್ಲಿ, ಎಲ್ಲ ನಾಯಕರ ಒಮ್ಮತದ ಅಭಿಪ್ರಾಯದಂತೆ ಟಿಕೆಟ್ ಪಡೆದಿದ್ದೇವೆ. ಘಟಾನುಘಟಿ ನಾಯಕರನ್ನು ಯಾರಾದ್ರೂ ಎದುರು ಹಾಕಿಕೊಳ್ಳುತ್ತಾರಾ..? ಆ ಘಟಾನುಘಟಿ ನಾಯಕರೇ ಮುಂದೆ ನಿಂತು ಎಂಎಲ್‍ಸಿ ಚುನಾವಣೆ ಮಾಡುತ್ತಾರೆ ಎಂದು ಇದೇ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದರು.
ಲಖನ್ ಜಾರಕಿಹೊಳಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು ಅದು ಅವರಿಗೆ ಬಿಟ್ಟಂತಹ ವಿಚಾರ. ಸ್ಪರ್ಧಿಸಲು ಅವರು ಸ್ವತಂತ್ರರಿದ್ದಾರೆ. ಅದು ಅವರಿಗೆ ಸಂಬಂಧಿಪಟ್ಟದ್ದು. ನನ್ನ ಪೋಕಸ್ ಇರೋದು, ಕಾಂಗ್ರೆಸ್ ಅಭ್ಯರ್ಥಿಯನ್ನು ಯಾವ ರೀತಿ ಗೆಲ್ಲಿಸಬೇಕು, ಕಾರ್ಯಾಧ್ಯಕ್ಷರು ಹೇಳಿದ ಕೆಲಸ ಮಾಡಬೇಕು ಎನ್ನುವುದು ಬಿಟ್ಟರೆ ನನಗೆ ಬೇರೆ ಯಾವುದೇ ವಿಷಯ ಸಂಬಂಧಿಸಿದ್ದಲ್ಲ ಎಂದರು.
ಬೆಳಗಾವಿ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ. ಗೆದ್ದ ಬಂದರೆ ಬೆಳಗಾವಿ ಜಿಲ್ಲೆಯ ಎಲ್ಲ ಕಾರ್ಯಕರ್ತರು, ನಾಯಕರು ಹೊಸ ಹುಮ್ಮಸ್ಸಿನಿಂದ ಪಕ್ಷವನ್ನು ಮತ್ತೆ ಸಂಘಟನೆ ಮಾಡುತ್ತಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲಾ ನಾಯಕತ್ವ ಇದಕ್ಕೆ ಸಂಬಂಧ ಬರೋದಿಲ್ಲ. 2023ಕ್ಕೆ ನಮ್ಮ ಜಿಲ್ಲೆಯಿಂದ ಬಹಳಷ್ಟು ನಮ್ಮ ಎಂಎಲ್‍ಎಗಳನ್ನು ತೆಗೆದುಕೊಂಡು ಬರುವ ನಿಟ್ಟಿನಲ್ಲಿ ಪಕ್ಷವನ್ನು ಸಂಘಟಿಸುತ್ತೇವೆ ಎಂದರು.
: ಒಟ್ಟಿನಲ್ಲಿ ಸತೀಶ ಜಾರಕಿಹೊಳಿ ನೇತೃತ್ವದಲ್ಲಿಯೇ ಚುನಾವಣೆ ಮಾಡುತ್ತೇವೆ. ಎಂಎಲ್‍ಸಿ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದರು.