ಲಕ್ನೋ, ನವೆಂಬರ್ 16: ಮುಂದಿನ ವರ್ಷ ಆರಂಭದಲ್ಲೇ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ತಮ್ಮದೇ ಆದ ಕಾರ್ಯತಂತ್ರವನ್ನು ರೂಪಿಸಿದೆ. ಪ್ರಚಾರ ಕಾರ್ಯವನ್ನು ಮಾಡುತ್ತಿದೆ. ಈ ಐದು ರಾಜ್ಯಗಳ ಪೈಕಿ ಉತ್ತರ ಪ್ರದೇಶವು ರಾಜಕೀಯವಾಗಿ ಹೆಚ್ಚು ಪ್ರಮುಖವಾದ ರಾಜ್ಯವಾಗಿದೆ.
ಪ್ರಸ್ತುತ ಬಿಜೆಪಿಯು ಇಲ್ಲಿ ಆಡಳಿತವನ್ನು ಹೊಂದಿದೆ. ಈ ನಡುವೆ ಉತ್ತರ ಪ್ರದೇಶದಲ್ಲಿ 2022 ರ ಚುನಾವಣಾ ಫಲಿತಾಂಶ ಏನು ಆಗಲಿದೆ ಎಂಬ ಬಗ್ಗೆ ಹಲವಾರು ಮಾಧ್ಯಮಗಳು ಚುನಾವಣಾಪೂರ್ವ ಸಮೀಕ್ಷೆಯನ್ನು ನಡೆಸುತ್ತಿದೆ.
ದೇಶದಲ್ಲಿ ಅತೀ ಹೆಚ್ಚು ವಿಧಾನ ಸಭೆ ಕ್ಷೇತ್ರವನ್ನು ಉತ್ತರ ಪ್ರದೇಶ ಹೊಂದಿದ್ದು, ಉತ್ತರ ಪ್ರದೇಶವು ಒಟ್ಟು 403 ಸದಸ್ಯರನ್ನು ಹೊಂದಿದೆ. ಕಳೆದ ಬಾರಿ ಬಿಜೆಪಿಯು ಭರ್ಜರಿ ಬಹುಮತದಿಂದ ಜಯ ಸಾಧಿಸಿದೆ. ಈ ಬಾರಿ ಮತ್ತೆ ಅಧಿಕಾರವನ್ನು ಏರುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಪ್ರಚಾರ ಕಾರ್ಯವನ್ನು ನಡೆಸುತ್ತಿದ್ದಾರೆ.
ಈ ನಡುವೆ ಟೈಮ್ಸ್ ನೌ ಉತ್ತರ ಪ್ರದೇಶದಲ್ಲಿ ಚುನಾವಣಾಪೂರ್ವ ಸಮೀಕ್ಷೆಯನ್ನು ನಡೆಸಿದೆ. ಈ ಸಮೀಕ್ಷೆಯ ಪ್ರಕಾರ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರವನ್ನು ಪಡೆಯಲಿದೆ. ಭರ್ಜರಿ ಬಹುಮತವನ್ನು ಬಿಜೆಪಿಯು ಗಳಿಸಲಿದೆ ಎಂದು ಚುನಾವಣಾಪೂರ್ವ ಸಮೀಕ್ಷೆ ಹೇಳಿದೆ. ಈ ಸಮೀಕ್ಷೆಯ ವರದಿ ಇಲ್ಲಿದೆ ಮುಂದೆ ಓದಿ.
ಬಿಜೆಪಿಗೆ ಭರ್ಜರಿ ಬಹುಮತ
ಉತ್ತರ ಪ್ರದೇಶದಲ್ಲಿ ಬಿಜೆಪಿಯು ಈ ಮುಂದಿನ ಚುನಾವಣೆಯಲ್ಲಿ ಭರ್ಜರಿ ಗೆಲುವನ್ನು ಸಾಧಿಸಲಿದೆ ಎಂದು ಟೈಮ್ಸ್ ನೌದ ಚುನಾವಣಾಪೂರ್ವ ಸಮೀಕ್ಷೆಯು ಹೇಳಿದೆ. ಟೈಮ್ಸ್ ನೌ ಸಮೀಕ್ಷೆ ಪ್ರಕಾರ ಉತ್ತರ ಪ್ರದೇಶದಲ್ಲಿ ಒಟ್ಟು 403 ವಿಧಾನಸಭೆ ಕ್ಷೇತ್ರಗಳ ಪೈಕಿ 239-245 ಕ್ಷೇತ್ರಗಳಲ್ಲಿ ಬಿಜೆಪಿಯು ಗೆಲುವು ಸಾಧಿಸಲಿದೆ. ಇನ್ನು ಸಮಾಜವಾದಿ ಪಕ್ಷವು (ಎಸ್‌ಪಿ) 119-125 ವಿಧಾನ ಸಭೆ ಕ್ಷೇತ್ರದಲ್ಲಿ ಜಯ ಸಾಧಿಸಲಿದೆ. ಇನ್ನು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) 28-32 ವಿಧಾನ ಸಭೆ ಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆಯಲಿದೆ. ಆದರೆ ಈ ನಡುವೆ ಪ್ರಿಯಾಂಕ ಗಾಂಧಿ ವಾದ್ರಾ ಉತ್ತರ ಪ್ರದೇಶದಲ್ಲಿ ಮಾಡಿದ ಎಲ್ಲಾ ಚುನಾವಣಾ ಕಾರ್ಯತಂತ್ರವು ವಿಫಲವಾಗುವಂತೆ ಸಮೀಕ್ಷೆಯು ತೋರಿಸುತ್ತಿದೆ. ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಕೇವಲ 5-8 ಕ್ಷೇತ್ರಗಳಲ್ಲಿ ಗೆಲುವು ಪಡೆಯಲಿದೆ.
ಯಾವ ಪ್ರದೇಶದಲ್ಲಿ, ಯಾವ ಪಕ್ಷಕ್ಕೆ ಅಧಿಕ ಸ್ಥಾನ?
ಬುಂದೇಲ್‌ಖಂಡ್ ಪ್ರದೇಶದಲ್ಲಿ ಒಟ್ಟು 19 ವಿಧಾನಸಭೆ ಕ್ಷೇತ್ರಗಳು ಇದ್ದು, ಈ ಪೈಕಿ ಬಿಜೆಪಿಯು 15-17 ಸೀಟುಗಳನ್ನು ಬಾಚಿಕೊಳ್ಳುವ ನಿರೀಕ್ಷೆ ಇದೆ. ಈ ಕ್ಷೇತ್ರದಲ್ಲಿ ಎಸ್‌ಪಿ 0-1 ಸ್ಥಾನ ಹಾಗೂ ಬಿಎಸ್‌ಪಿ 2-5 ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ, ಇನ್ನು ಕಾಂಗ್ರೆಸ್ 1-2 ಸ್ಥಾನವನ್ನು ಪಡೆಯುವ ನಿರೀಕ್ಷೆ ಇದೆ. ದೋಬ್ ಪ್ರದೇಶದಲ್ಲಿ ಒಟ್ಟು 71 ಸ್ಥಾನಗಳು ಇದ್ದು, ಈ ಪೈಕಿ 37-40 ಕ್ಷೇತ್ರದಲ್ಲಿ ಬಿಜೆಪಿ, 26-28 ರಲ್ಲಿ ಎಸ್‌ಪಿ, 4-6 ರಲ್ಲಿ ಬಿಎಸ್‌ಪಿ, ಕಾಂಗ್ರೆಸ್ 0-2 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಹೇಳುತ್ತದೆ. ಪೂರ್ವಾಂಚಲ್‌ನಲ್ಲಿ 92 ಸೀಟುಗಳು ಇದ್ದು, ಬಿಜೆಪಿ 47-50 ಕ್ಷೇತ್ರ, ಎಸ್‌ಪಿ 31-35 ಸೀಟುಗಳನ್ನು ಪಡೆಯಲಿದೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಬಿಜೆಪಿಯು 40-42 ಕ್ಷೇತ್ರ, ಎಸ್‌ಪಿ 21-24 ಕ್ಷೇತ್ರ ಹಾಗೂ ಬಿಎಸ್‌ಪಿ 2-3 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. ಅವಧ್ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಎಸ್‌ಪಿ ನಡುವೆ ಭಾರೀ ಸ್ಪರ್ಧೆ ನಡೆಯಲಿದೆ ಎಂದು ಸಮೀಕ್ಷೆಯು ಹೇಳುತ್ತದೆ. ಈ ಕ್ಷೇತ್ರದಲ್ಲಿ ಬಿಜೆಪಿಯು 69-72 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಎಸ್‌ಪಿ 23-26 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. ಬಿಎಸ್‌ಪಿ 7-10 ಸ್ಥಾನವನ್ನು ಪಡೆಯಲಿದೆ. ಈ ಪ್ರದೇಶದಲ್ಲಿ ಒಟ್ಟು 101 ಕ್ಷೇತ್ರಗಳು ಇದ್ದು, ಈ ಹಿಂದೆ ಬಿಜೆಪಿಯು 84 ಕ್ಷೇತ್ರಗಳಲ್ಲಿ ಗೆಲುವು ಪಡೆದಿತ್ತು. ಎಸ್‌ಪಿ ಆರು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಪಡೆದಿತ್ತು.
ಈ ಚುನಾವಣಾಪೂರ್ವ ಸಮೀಕ್ಷೆ ನಡೆಸಿದ್ದು ಹೇಗೆ?
ಟೈಮ್ಸ್ ನೌ ಪೋಲ್ಸ್ಟ್ರಾಟ್ ಒಪಿನಿಯನ್ ಪೋಲ್ (ಚುನಾವಣಾಪೂರ್ವ ಸಮೀಕ್ಷೆ) ಗಾಗಿ ಉತ್ತರ ಪ್ರದೇಶದ ಒಟ್ಟು 9000 ಮಂದಿಯ ಅಭಿಪ್ರಾಯವನ್ನು ಸಂಗ್ರಹ ಮಾಡಲಾಗಿದೆ. 2022 ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಯಾರನ್ನು ನೀವು ಮತ್ತೆ ಅಧಿಕಾರಕ್ಕೆ ತರುತ್ತೀರಿ ಎಂಬ ಬಗ್ಗೆ 9000 ಮಂದಿಯ ಅಭಿಪ್ರಾಯ ಪಡೆಯಲಾಗಿದೆ. ಸಮೀಕ್ಷೆಯನ್ನು ನವೆಂಬರ್ 6-10 ರ ನಡುವೆ ನಡೆಸಲಾಗಿದೆ. “ನಾವು ಬಳಸಿದ ವಿಧಾನವು ರ್‍ಯಾಂಡಮ್ ಮಾದರಿಯಾಗಿದೆ. ನಾವು ಸಮಾಜದ ಎಲ್ಲಾ ವರ್ಗಗಳ ಜನರನ್ನು ಸೇರಿಸಿ ಈ ಸಮೀಕ್ಷೆಯನ್ನು ನಡೆಸಿದ್ದೇವೆ. ಪ್ರತಿ ಸಮುದಾಯದ ಅಭಿಪ್ರಾಯ ಎಂಬುವುದನ್ನು ನಾವು ಪಡೆದಿದ್ದೇವೆ,” ಎಂದು ಪೋಲ್‌ಸ್ಟ್ರಾಟ್‌ನ ನಿರ್ದೇಶಕ ಶಿವ ಸೆಹಗಲ್ ಹೇಳಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022: ಹಿನ್ನೆಲೆ
ಉತ್ತರ ಪ್ರದೇಶದಲ್ಲಿ ಒಟ್ಟು 403 ವಿಧಾನಸಭೆ ಕ್ಷೇತ್ರಗಳು ಇದ್ದು, 2017ರಲ್ಲಿ ಬಿಜೆಪಿಯು ಒಟ್ಟು 312 ಸ್ಥಾನಗಳನ್ನು ತನ್ನ ತೆಕ್ಕೆಗೆ ಪಡೆದಿತ್ತು. ಆ ಬಳಿಕ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರದ ಚುಕ್ಕಾಣಿ ತನ್ನ ಕೈಗೆ ಪಡೆದಿದ್ದು, ಐದು ವರ್ಷಗಳ ಕಾಲ ಅಂದರೆ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಉಳಿದಿದ್ದಾರೆ. 2017 ರ ಯುಪಿ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಶೇಕಡಾ 40 ರಷ್ಟು ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಈ ಸಂದರ್ಭದಲ್ಲೇ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ಕಡಿಮೆ ಸ್ಥಾನಗಳನ್ನು ಗಳಿಸಿದೆ. ಆದರೆ ಈ ಬಾರಿ ಎಸ್‌ಪಿ ಚುನಾವಣಾ ಓಟದಲ್ಲಿ ಕೊಂಚ ವೇಗ ಪಡೆಯುವ ಸಾಧ್ಯತೆ ಇದೆ. ಬಿಜೆಪಿ ಕೆಲವು ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಚುಣಾವಣಾಪೂರ್ವ ಸಮೀಕ್ಷೆಯು ಹೇಳುತ್ತದೆ. ಇನ್ನು ಕಾಂಗ್ರೆಸ್ ಕಳೆದ ಬಾರಿಯಂತೆ ಈ ಬಾರಿಯೂ ಹೀನಾಯವಾಗಿ ಸೋಲು ಕಾಣಲಿದೆ ಎಂದು ಕೂಡಾ ಸಮೀಕ್ಷೆಯು ತಿಳಿಸಿದೆ.