ಬೆಂಗಳೂರು: ಹ್ಯಾಕರ್ ಶ್ರೀಕೃಷ್ಣ ಪೊಲೀಸರ ಸುಪರ್ದಿಯಲ್ಲಿದ್ದಾಗಲೇ ಆತನ ಮೂಲಕ ಬಿಟ್‌ಕಾಯಿನ್‌ಗಳನ್ನು ರಾಜ್ಯದ ಪ್ರಭಾವಿ ರಾಜಕಾರಣಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವರ್ಗಾವಣೆ ಮಾಡಲಾಗಿತ್ತು ಎಂಬ ಸುಳಿವು ನೀಡುವ ದೂರವಾಣಿ ಸಂಭಾಷಣೆಯೊಂದರ ತುಣುಕು ಶುಕ್ರವಾರ ಬಹಿರಂಗಗೊಂಡಿದೆ.
ಐಪಿಎಸ್ ಅಧಿಕಾರಿಯೊಬ್ಬರು ಸಿಐಡಿಯ ಸೈಬರ್ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರ ಜತೆ ನಡೆಸಿದ್ದಾರೆ ಎನ್ನಲಾದ ಸಂಭಾಷಣೆಯಲ್ಲಿ ಶ್ರೀಕೃಷ್ಣ ಪೊಲೀಸ್ ಕಸ್ಟಡಿಯಲ್ಲಿದ್ದಾಗ ನಡೆದಿರುವ ಘಟನಾವಳಿಗಳ ಮಾಹಿತಿ ಇದೆ.
ಪೊಲೀಸ್ ಅಧಿಕಾರಿಗಳ ಸಂಭಾಷಣೆಯ ಪೂರ್ಣಪಾಟ ಹೀಗಿದೆ…
ಸಿಐಡಿ ತನಿಖಾಧಿಕಾರಿ- ಅದು ಫ್ಲಕ್ಚುಯೇಷನ್ ಆಗ್ತಾ ಇರುತ್ತೆ. ಇವತ್ತು ಹೀಗೆ ಇರುತ್ತೆ, ನಾಳೆ ಹೇಳೋಕೆ ಆಗಲ್ಲ.
ಐಪಿಎಸ್ ಅಧಿಕಾರಿ- ಅಂದಾಜು, ಇವತ್ತು ಬಿಟ್‌ಕಾಯಿನ್ ಎಷ್ಟು?
ತನಿಖಾಧಿಕಾರಿ- ಈಗ ಒಂದು ಬಿಟ್‌ಕಾಯಿನ್ ₹ 56 ಲಕ್ಷ ಇದೆ. ಅದರಲ್ಲಿಯೂ ವೆರೈಟೀಸ್ ಇದೆ. ₹ 30 ಲಕ್ಷ ಇದೆ. ಡಿಪೆಂಡ್ಸ್.
ಐಪಿಎಸ್ ಅಧಿಕಾರಿ- ಅವನ ಅಕೌಂಟ್‌ನಿಂದ ಬೇರೆಯವರ ಅಕೌಂಟ್‌ಗೆ ಬಿಟ್‌ಕಾಯಿನ್ ಹೋಗಿದ್ಯಾ?
ತನಿಖಾಧಿಕಾರಿ- ಹಾ ಹೋಗಿದೆ ಸರ್. ದೊಡ್ಡವರು ಸುಮಾರು ಜನ ಟ್ರಾನ್ಸಾಕ್ಷನ್ ಅದ್ರಲ್ಲೇ ಮಾಡಿದ್ದಾರೆ.
ಐಪಿಎಸ್ ಅಧಿಕಾರಿ- ಯಾರು ಅಂತಾ ನಿಮಗೆ ಗೊತ್ತಾ?
ತನಿಖಾಧಿಕಾರಿ- ಅರ್ಧಂಬರ್ಧ ಗೊತ್ತಿದೆ ಸರ್. ಫುಲ್ ಕನ್ಫರ್ಮ್ ಇಲ್ಲ. ಎಲ್ಲ ದೊಡ್ಡವರೇ ಇದ್ದಾರೆ.
ಐಪಿಎಸ್ ಅಧಿಕಾರಿ- ಯಾರ್ಯಾರಿದ್ದಾರೆ ಅಂದಾಜು?
ತನಿಖಾಧಿಕಾರಿ- ಮಿನಿಸ್ಟರ್ ಲೆವೆಲ್ನಲ್ಲೇ ಇದ್ದಾರೆ.
ಐಪಿಎಸ್ ಅಧಿಕಾರಿ- ಹೋಮ್ ಮಿನಿಸ್ಟರ್…ಆ?
ತನಿಖಾಧಿಕಾರಿ- ಅಲ್ಲಲ್ಲ, ಬೇರೆ ಮಿನಿಸ್ಟರ್‌ಗಳಿದ್ದಾರೆ. ಐಪಿಎಸ್ ಅಧಿಕಾರಿಗಳಿದ್ದಾರೆ.
ಐಪಿಎಸ್ ಅಧಿಕಾರಿ- ಐಪಿಎಸ್ ಅಂದ್ರೆ ಯಾರ್ಯಾರು?
ತನಿಖಾಧಿಕಾರಿ- ಹೆಸರು ಗೊತ್ತಿಲ್ಲ ಸರ್.
ಐಪಿಎಸ್ ಅಧಿಕಾರಿ- ಆಯ್ತು ಬಿಡಪ್ಪ. ಒಟ್ನಲ್ಲಂತೂ ಆಗಿದೆ.
ತನಿಖಾಧಿಕಾರಿ- ಆಗಿದೆ ಸರ್.
ಐಪಿಎಸ್ ಅಧಿಕಾರಿ- ನಿನ್ನೆ ಮೊನ್ನೆ ಶರತ್ ಅವ್ರನ್ನ ಕರೆದಿದ್ರಾ?
ತನಿಖಾಧಿಕಾರಿ- ಇಲ್ಲ, ಇವ್ರು ಎರಡು, ಮೂರು ದಿನದ ಹಿಂದೆ ಹೋಗಿದ್ರು. ಇಂಟೆಲಿಜೆನ್ಸ್‌ನವರು ಕರೆದಿದ್ದರು. ಎರಡು ದಿನಗಳ ಹಿಂದೆ ದಯಾನಂದ್ ಸಾಹೇಬ್ರು ಫುಲ್ ಅವನ ಮಾಹಿತಿ ತಗೊಂಡ್ರು
ಐಪಿಎಸ್ ಅಧಿಕಾರಿ- ಅವನ ಬಗ್ಗೆ ಕೇಳುವುದಕ್ಕೆ ಅಷ್ಟೇನಾ
ತನಿಖಾಧಿಕಾರಿ- ಹೌದು ಅವನ ಬಗ್ಗೆ ಇನ್ಫರ್ಮೇಷನ್ ಕೇಳುವುದಕ್ಕೆ ಕರೆಸಿದ್ದರು.
ಐಪಿಎಸ್ ಅಧಿಕಾರಿ- ಏನ್ ಸೆಕ್ಷನ್ ಹಾಕಿದ್ರು?
ತನಿಖಾಧಿಕಾರಿ- 66-ಇ. ಮಾಮೂಲಿ ಸರ್ ಅದು. ಬೇರೇನೂ ಇಲ್ಲ.
ಐಪಿಎಸ್ ಅಧಿಕಾರಿ- ಹೌದಾ?
ತನಿಖಾಧಿಕಾರಿ- ಹೌದು ಸರ್ ಅವನು ಎರಡ್ಮೂರು ತಿಂಗಳು ಒಳಗಡೆ ಇದ್ದ. ಆಮೇಲೆ ಬೇಲ್ ಆಯ್ತು.