ಬೆಂಗಳೂರು: . ಒಂದು ಕಡೆ ಭಜರಂಗಿ 2 ಭರ್ಜರಿಯಾಗಿ ಓಡ್ತಾ ಇತ್ತು.. ಆ ಸಂತೋಷ ಖುಷಿಯಲ್ಲಿ ಅಭಿಮಾನಿಗಳು ತೇಲ್ತಾ ಇದ್ರು. ಅಭಿಮಾನಿಗಳ ನಡುವೆಯೇ ಶಿವಣ್ಣ ಕೂಡ ಕೂತು ಎಂಜಾಯ್ ಮಾಡ್ತಾ ಇದ್ರು.
ಆ ಖುಷಿಯ ನಡುವೆ ಬರ ಸಿಡಿಲು ಬಡಿದಂತೆ ಆದದ್ದು ಅಪ್ಪು ಇನ್ನಿಲ್ಲ ಅನ್ನೋ ಸುದ್ದಿ.
ಹೌದು, ಸಿನಿಮಾ ನೋಡುತ್ತಿದ್ದ ಎಲ್ಲರಿಗೂ ಒಂದು ಕ್ಷಣ ದಿಗ್ಬ್ರಮೆಯುಂಟು ಮಾಡಿತ್ತು. ಸುಮಾರು 11 ಗಂಟೆಗೆ ಅಪ್ಪು ಆಸ್ಪತ್ರೆ ಸೇರಿದ್ರು. ಅದಾಗಲೇ ಇಲ್ಲ ಎಂಬ ಸುದ್ದಿ ಬಂದಿತ್ತು. ರಾತ್ರಿಯೆಲ್ಲ ಮನೆಯವರ ಜೊತೆ ನಗು ನಗುತ್ತಾ ಮಾತಾಡಿಕೊಂಡಿದ್ದವರು, ಪಾರ್ಟು ಅಟೆಂಡ್ ಮಾಡಿದ್ದವರು, ಅಣ್ಣನ ಸಿನಿಮಾ ರಿಲೀಸ್ ಖುಷಿ ಅನುಭವಿಸಿದ್ದವರು ಒಂದೇ ಕ್ಷಣಕ್ಕೆ ಇಲ್ಲವೆಂದಾದರೇ ಸಾಮಾನ್ಯರಾದ ನಮಗೇನೆ ಸುಧಾರಿಸಿಕೊಳ್ಳಲಾಗಲಿಲ್ಲ. ಇನ್ನು ಅಭಿಮಾನಿಗಳು ಹುಚ್ಚರಾಗಿಬಿಟ್ಟಿದ್ದರು. ಅದೆಷ್ಟೋ ಜನ ಅನ್ನ ನೀರು ಬಿಟ್ಟು ಅಪ್ಪು ಜೊತೆ ಸ್ವರ್ಗಕ್ಕೆ ದಾರಿ ಹುಡುಕುತ್ತಾ ಹೊರಟಿದ್ದರು. ಇಷ್ಟು ಪ್ರೀತಿ, ಅಪ್ಪುಗೆ ಇರುವಾಗ ಕುಟುಂಬಸ್ಥರಿಗೆ ಹೇಗಾಗಿರಬೇಡ..? ಅದರಲ್ಲೂ ಹುಟ್ಟಿದಾಗಿನಿಂದ ಸೆಕೆಂಡ್ ಮದರ್ ನಂತೆ ಸಾಕಿದ್ದ ಶಿವಣ್ಣನಿಗೆ ಹೇಗೆ ಅನ್ನಿಸಿರಬಹುದು.
ಆ ಬಗ್ಗೆ ಮಾತನಾಡಿರುವ ಶಿವಣ್ಣ, ಆ ಕರಾಳ ಕ್ಷಣದ ವಿವರ ನೀಡಿದ್ದಾರೆ. ಆ ಸುದ್ದಿ ಕೇಳಿದಾಕ್ಷಣ ನನಗೆ ರಾಡ್ ತೆಗೆದು ಯಾರೊ ಹೊಡೆದಂತಾಯ್ತು. ಗಾಬರಿಯಾದೆ, ಫೋನ್ ತೆಗೆದು ಎಸೆದೆ ಬಿಟ್ಟೆ. ಸೀಟ್ ಮೇಲೆ ಕುಳಿತುಕೊಳ್ಳಲು ಆಗಲಿಲ್ಲ. ನೆಲಕ್ಕೆ ಕುಸಿದೆ. ಯಾರೇ ಮಾತಾಡಿಸಿದ್ರು ರೇಗ್ತಾ ಇದ್ದೆ. ಗಾಡಿಯನ್ನು ಓಡಿಸದೇ ಹಿಂದೆ ಕುಳಿತು ಬಿಟ್ಟೆ ಎಂದಿದ್ದಾರೆ.
ಆ ನೋವು, ಆ ಆತಂಕ, ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಶಿವಣ್ಣ ಇದ್ದದ್ದು ಎಲ್ಲರಿಗೂ ಗೊತ್ತೆ ಇದೆ. ಯಾಕಂದ್ರೆ ಅಪ್ಪು ಅಂತಿಮ ಕಾರ್ಯದವರೆಗೂ ಶಿವಣ್ಣ ಮಂಕಾಗಿ ಹೋಗಿದ್ದರು. ಕಡೆಗೆ ಒಮ್ಮೆ ತಡೆದುಕೊಳ್ಳಲಾಗದೆ ಕಣ್ಣೀರು ಹಾಕಿದ್ರು.