Breaking News

ಭಯಾನಕವಾಗಿದೆ ಶ್ರೀಕೃಷ್ಣ ಅಲಿಯಾಸ್ ಹ್ಯಾಕರ್ ಶ್ರೀಕಿ ಬ್ಯಾಗ್ರೌಂಡ್..!

Spread the love

ಬೆಂಗಳೂರು, ನ.11- ಶ್ರೀಕೃಷ್ಣ ಅಲಿಯಾಸ್ ಹ್ಯಾಕರ್ ಶ್ರೀಕಿ ಈ ಹೆಸರು ಕೇಳಿದರೆ ರಾಜಕಾರಣಿಗಳು, ಗಣ್ಯಾತಿಗಣ್ಯ ವ್ಯಕ್ತಿಗಳು ಬೆಚ್ಚಿ ಬೀಳ್ತಾರೆ. ಇಂತಹ ಶ್ರೀಕಿಯ ಪೂರ್ವಾಪರ ಕೆದಕಿದರೆ ಅದೊಂದು ರೋಚಕ ಕಥೆಯೇ ಸರಿ.

ಏನದು ಆತನ ಪೂರ್ವಾಪರ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಈ ಸ್ಟೋರಿ ಓದಿ:

ಜಯನಗರದ ನಿವಾಸಿ ಗೋಪಾಲ್ ರಮೇಶ್ ಎಂಬುವವರ ಪುತ್ರನಾಗಿರುವ ಈತ ಈಗ ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್ ಎಂದು ಗುರುತಿಸಿಕೊಂಡಿದ್ದಾನೆ. ಯಾರಿಗೂ ಸುಳಿವು ಸಿಗದಂತೆ ಹ್ಯಾಕ್ ಮಾಡುವುದೇ ಈತನ ಸ್ಪೆಷಾಲಿಟಿ. ಈತ ಮಾಡುವ ಹ್ಯಾಕ್‍ಗೆ ಯಾವುದೇ ಸಾಕ್ಷಿ ಸಿಗದಂತೆ ನೋಡಿಕೊಳ್ಳುವುದರಲ್ಲೂ ನಿಸ್ಸೀಮ.

ಈತ ಇದುವರೆಗೂ ಸಾವಿರಾರು ಹ್ಯಾಕ್ ಮಾಡಿದ್ದರೂ ಆತ ತನ್ನ ಕಾರ್ಯಕ್ಕೆ ಸ್ವಂತ ಲ್ಯಾಪ್‍ಟಾಪ್, ಕಂಪ್ಯೂಟರ್, ಮೊಬೈಲ್ ಬಳಸಿಯೇ ಇಲ್ಲ. 4ನೆ ತರಗತಿ ಓದುವಾಗಲೇ ಮೊಬೈಲ್ ಹ್ಯಾಕ್ ಮಾಡುವುದರಲ್ಲಿ ಪರಿಣಿತಿ ಹೊಂದಿದ್ದ ಶ್ರೀಕಿ ಹೈಸ್ಕೂಲ್ ವೇಳೆಗೆ ಪ್ರಮುಖ ಹ್ಯಾಕರ್ ಆಗಿ ಗುರುತಿಸಿಕೊಂಡಿದ್ದ.

ತನ್ನ 17ನೆ ವಯಸ್ಸಿಗೆ ಮನೆ ಬಿಟ್ಟು ದೂರದ ಬದರೀನಾಥ್‍ಗೆ ಹೋಗಿದ್ದ ಶ್ರೀಕಿಯನ್ನು ಪೊಲೀಸರು ಪತ್ತೆಹಚ್ಚಿ ಮತ್ತೆ ಪೋಷಕರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. ಚಿಕ್ಕಂದಿನಿಂದಲೂ ಹ್ಯಾಕ್ ಮಾಡುವುದರಲ್ಲಿ ಪರಿಣಿತನಾಗಿದ್ದ ಶ್ರೀಕಿ ಹೈಸ್ಕೂಲ್ ಓದುವಾಗ ಗೈರು ಹಾಜರಾಗುವ ತನ್ನ ಸಹಪಾಠಿಗಳಿಗೆ ಶಾಲೆಯ ಕಂಪ್ಯೂಟರ್ ಹ್ಯಾಕ್ ಮಾಡಿ ಹಾಜರಿ ಹಾಕಿಸುವಲ್ಲಿ ಯಶಸ್ವಿಯಾಗಿದ್ದ.

ವಿವಿ ಪುರಂನ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದಾಗಲೇ ಈತನಿಗೆ ಕೆಲ ಪ್ರಮುಖ ಹ್ಯಾಕರ್‍ಗಳ ಪರಿಚಯವಾಗಿತ್ತು. ಪಿಯುಸಿ ನಂತರ ಶ್ರೀಕಿಯನ್ನು ಆತನಪೋಷಕರು ಉನ್ನತ ವ್ಯಾಸಂಗಕ್ಕಾಗಿ ನೆದರ್‍ಲ್ಯಾಂಡ್‍ಗೆ ಕಳುಹಿಸುವಾಗ ಅಲ್ಲಿ ಆತನಿಗೆ ಅಂತಾರಾಷ್ಟ್ರೀಯ ಹ್ಯಾಕರ್‍ಗಳ ಪರಿಚಯವಾಯಿತು.

ಅಂತಾರಾಷ್ಟ್ರೀಯ ಹ್ಯಾಕರ್‍ಗಳ ಗುಂಪಿನೊಂದಿಗೆ ಗುರುತಿಸಿಕೊಂಡ ನಂತರ ಶ್ರೀಕಿ ಓದುವುದನ್ನು ಕಡಿಮೆ ಮಾಡಿ ಹ್ಯಾಕ್ ಮಾಡುವುದನ್ನೇ ಕಾಯಕ ಮಾಡಿಕೊಂಡ. ಕೆಲ ದಿನಗಳ ನಂತರ ಹ್ಯಾಕರ್ಸ್ ಗುಂಪು ಇಬ್ಭಾಗವಾದಾಗ ಅನಿವಾರ್ಯವಾಗಿ ಶ್ರೀಕಿ ಮತ್ತೆ ಬೆಂಗಳೂರಿಗೆ ವಾಪಸಾಗಿದ್ದ.
ವಿದೇಶದಲ್ಲಿ ಕಲಿತ ವಿದ್ಯೆಯನ್ನೇ ಬಂಡವಾಳ ಮಾಡಿಕೊಂಡ ಈತ ನಗರದ ಗಣ್ಯಾತಿಗಣ್ಯ ವ್ಯಕ್ತಿಗಳು, ಉದ್ಯಮಿಗಳು ಹಾಗೂ ಕೆಲ ಹಿರಿಯ ಪೋಲೀಸ್ ಅಕಾರಿಗಳ ಮಕ್ಕಳನ್ನು ಪರಿಚಯ ಮಾಡಿಕೊಂಡಿದ್ದ.

ಯುಬಿ ಸಿಟಿಯಲ್ಲಿ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ವಿದ್ವತ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದಾಗ ನಲಪಾಡ್ ಜತೆ ಇದೇ ಶ್ರೀಕಿ ಕಾಣಿಸಿಕೊಂಡಿದ್ದ. ಹಲ್ಲೆ ಪ್ರಕರಣದಲ್ಲಿ ನಲಪಾಡ್ ಸೇರಿದಂತೆ ಆತನ ಸಹಚರರೆಲ್ಲರೂ ಪೊಲೀಸರಿಗೆ ಸಿಕ್ಕಿಬಿದ್ದರೂ ಶ್ರೀಕಿ ಯಾರಿಗೂ ಕಾಣಿಸಿಕೊಳ್ಳದಂತೆ ಹೈದರಾಬಾದ್‍ಗೆ ಬಸ್ ಹತ್ತಿ ಪರಾರಿಯಾಗಿದ್ದ.

ಹೈದರಾಬಾದ್‍ನಿಂದ ಸೀದಾ ಋಷಿಕೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ ಈ ಖತರ್ನಾಕ್ ಆಸಾಮಿ ನಲಪಾಡ್‍ಗೆ ಜಾಮೀನು ಸಿಕ್ಕ ನಂತರವಷ್ಟೇ ಬೆಂಗಳೂರಿಗೆ ಹಿಂದಿರುಗಿದ್ದು. ಬೆಂಗಳೂರಿನಲ್ಲಿ ನೆಲೆನಿಂತು ಸರ್ಕಾರ, ಸ್ಥಳೀಯ ಸಂಸ್ಥೆಗಳು ಕರೆಯುವ ಈ ಟೆಂಡರ್‍ಗಳನ್ನು ಹ್ಯಾಕ್ ಮಾಡುವ ಕಾರ್ಯದಲ್ಲಿ ನಿರತನಾಗಿದ್ದ.

ಹ್ಯಾಕ್ ಮಾಡುವ ಮೂಲಕ ಕೋಟಿ ಕೋಟಿ ಸಂಪಾದಿಸುತ್ತಿದ್ದ ಶ್ರೀಕಿ ಐಷಾರಾಮಿ ಹೊಟೇಲ್‍ಗಳನ್ನೇ ಉಳಿದುಕೊಳ್ಳುತ್ತಿದ್ದ. ವಿದೇಶ ಪ್ರವಾಸ ಕೈಗೊಳ್ಳಬೇಕಾದರೆ ಪ್ರೈವೇಟ್ ಜೆಟ್‍ಗಳನ್ನು ಬಳಕೆ ಮಾಡುತ್ತಿದ್ದ. ಇದರ ಜತೆಗೆ ಕ್ರೂಷರ್‍ಗಳಲ್ಲಿ ನಡೆಯುವ ಐಷಾರಾಮಿ ಡ್ರಗ್ ಪಾರ್ಟಿಗಳಿಗೂ ಹಾಜರಾಗುತ್ತಿದ್ದ.

ಕೈಕೊಟ್ಟ ನಸೀಬು: ಹ್ಯಾಕ್ ಮಾಡುತ್ತ0 ಮೋಜಿನ ಜೀವನ ನಡೆಸುತ್ತ ಹಾಯಾಗಿದ್ದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಗೆ ನಸೀಬು ಕೈಕೊಟ್ಟಿತ್ತು.ಕಳೆದ ಜನವರಿಯಲ್ಲಿ ಸಿಸಿಬಿ ಪೊಲೀಸರು ಶ್ರೀಕಿಯನ್ನು ಡ್ರಗ್ ಕೇಸ್‍ನಲ್ಲಿ ಬಂಸಿ ವಿಚಾರಣೆಗೊಳಪಡಿಸಿದಾಗ ಆತ ಬಿಟ್ ಕಾಯಿನ್ ದಂಧೆಯಲ್ಲೂ ತೊಡಗಿಸಿಕೊಂಡಿದ್ದು ಪತ್ತೆಯಾಗಿತ್ತು.

ಆ ಸಂದರ್ಭದಲ್ಲೇ ಆತನ ಬಳಿ ಇದ್ದ ಸುಮಾರು 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್‍ಗಳನ್ನು ಪೊಲೀಸರು ವಶಪಡಿಸಿಕೊಂಡು ಜೈಲಿಗಟ್ಟಿದ್ದರು.ಮೂರ್ನಾಲ್ಕು ತಿಂಗಳುಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಈತ ಏರ್‍ಪೋರ್ಟ್ ರಸ್ತೆಯಲ್ಲಿರುವ ಫೈವ್‍ಸ್ಟಾರ್ ಹೊಟೇಲ್‍ವೊಂದರಲ್ಲಿ ವಾಸ್ತವ್ಯ ಹೂಡಿದ್ದ.

ಕಳೆದ ಶನಿವಾರ ಚಿನ್ನದ ವ್ಯಾಪಾರಿ ವಿಷ್ಣುಭಟ್ ಎಂಬಾತ ಶ್ರೀಕಿಯನ್ನು ಭೇಟಿಯಾಗಲು ಆತ ತಂಗಿದ್ದ ಫೈವ್‍ಸ್ಟಾರ್ ಹೊಟೇಲ್‍ಗೆ ತೆರಳಿದಾಗ ಅಲ್ಲಿನ ಭದ್ರತಾ ಸಿಬ್ಬಂದಿಯೊಂದಿಗೆ ಜಗಳ ತೆಗೆದು ಆತನ ಮೇಲೆ ಹಲ್ಲೆ ಮಾಡಲಾಗಿತ್ತು. ಹಲ್ಲೆ ಆರೋಪದಲ್ಲಿ ವಿಷ್ಣುಭಟ್‍ನನ್ನು ಹಾಗೂ ಹಲ್ಲೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶ್ರೀಕಿಯನ್ನು ಜೀವನ್‍ಭೀಮಾ ನಗರ ಪೊಲೀಸರು ಬಂಸಿದ್ದರು.

ಬಂತರನ್ನು ವಿಚಾರಣೆಗೊಳಪಡಿಸಿದ ಸಂದರ್ಭದಲ್ಲಿ ಇಬ್ಬರು ಡ್ರಗ್ ಸೇವನೆ ಮಾಡಿರುವುದು ದೃಢಪಟ್ಟಿತ್ತು. ಇದೀಗ ಹಲ್ಲೆ ಪ್ರಚೋದನೆ ಆರೋಪಕ್ಕೆ ಗುರಿಯಾಗಿದ್ದ ಶ್ರೀಕಿಗೆ ಜಾಮೀನು ದೊರೆತಿದ್ದು, ಆತ ಮತ್ತ್ಯಾವ ಬಿಲದಲ್ಲಿ ಅಡಗಿಕೊಂಡು ಇನ್ನ್ಯಾವ ಖತರ್ನಾಕ್ ಕಾರ್ಯಕ್ಕೆ ಕೈ ಹಾಕಿದ್ದಾನೋ ಆ ದೇವರೇ ಬಲ್ಲ.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ