ಗಡಿ ನಾಡಿನಲ್ಲಿ ಕನ್ನಡ ಸಾಹಿತ್ಯವನ್ನು, ಕನ್ನಡ ಕಿಡಿಯನ್ನು ಈ ಐದು ವರ್ಷದಲ್ಲಿ ಹೊತ್ತಿಸಿ, ಹೊಸ ಯುಗವನ್ನೇ ಮಂಗಲಾ ಮೆಟಗುಡ್ಡ ಅವರು ಆರಂಭಿಸಿದ್ದಾರೆ. ಇನ್ನೊಂದು ಸಲ ಅಧ್ಯಕ್ಷರಾಗಿ, ಇನ್ನುಳಿದ ಕೆಲಸಗಳನ್ನು ಪೂರ್ಣ ಮಾಡಲಿ ಎಂದು ಒತ್ತಾಯ ಪೂರ್ವಕವಾಗಿ ಕಸಾಪ ಚುನಾವಣೆಗೆ ನಿಲ್ಲಿಸಿದ್ದೇವೆ. ಹೀಗಾಗಿ ಕನ್ನಡಾಭಿಮಾನಿಗಳು ಮಂಗಲಾ ಮೆಟಗುಡ್ಡ ಅವರನ್ನು ಆರಿಸಿ ತರಬೇಕು ಎಂದು ಕೆಎಲ್‍ಇ ಕಾರ್ಯಾಧ್ಯಕ್ಷರು, ಮಾಜಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ ಮನವಿ ಮಾಡಿಕೊಂಡರು.ಬೆಳಗಾವಿಯ ಕನ್ನಡ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ.ಪ್ರಭಾಕರ್ ಕೋರೆ ಅವರು ಮಂಗಲಾ ಅಂಗಡಿ ಅವರು ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷರಾದ ನಂತರ ಸಾಕಷ್ಟು ಕೆಲಸ ಮಾಡಿದ್ದಾರೆ. ಕನ್ನಡ ಸಾಹಿತ್ಯ, ಅಭಿಮಾನ ಮೂಡಿಸಿದ ಶ್ರೇಯಸ್ಸು ಅವರಿಗೆ ಸಲ್ಲಬೇಕು. ಗಡಿ ನಾಡಿನ ಪ್ರತಿ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬೆಳೆಸಿದ್ದಾರೆ. ಅದರ ಜೊತೆಗೆ ಕನ್ನಡ ಭವನ ನಿರ್ಮಾಣದ ಕೆಲಸ ಆರಂಭಿಸಿದ್ದಾರೆ. ಖಾನಾಪುರದಲ್ಲಿ ಈಗಾಗಲೇ ಕನ್ನಡ ಸಾಹಿತ್ಯ ಭವನ ನಿರ್ಮಾಣ ಆರಂಭಿಸಿದ್ದಾರೆ. ಇನ್ನು ನಿಪ್ಪಾಣಿಯಲ್ಲಿ ಸರ್ಕಾರ ಜಾಗ ಕೊಡಲು ಒಪ್ಪಿದೆ.
ಹೀಗಾಗಿ ಅಲ್ಲಿಯೂ ಸಾಹಿತ್ಯ ಭವನ ನಿರ್ಮಾಣ ಆಗಲಿದೆ ಎಂದರು.ಇನ್ನು ಮಂಗಲಾ ಮೆಟಗುಡ್ಡ ಅವರಿಗೆ ಬೆಂಬಲ ನೀಡಿ ಮೂವರು ಅಭ್ಯರ್ಥಿಗಳನ್ನು ತಮ್ಮ ನಾಮಪತ್ರ ವಾಪಸ್ಸು ಪಡೆದುಕೊಂಡಿದ್ದಾರೆ. ಕನ್ನಡಾಭಿಮಾನಿಗಳಿಗೆ ನಾನು ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ. ಇದೊಂದು ಸಲ ಐದು ವರ್ಷ ಅವರಿಗೆ ಅಧಿಕಾರ ಕೊಟ್ಟರೆ ಗಡಿ ತಾಲೂಕುಗಳಾದ ಖಾನಾಪುರ, ನಿಪ್ಪಾಣಿ ಸೇರಿದಂತೆ ಎಲ್ಲೆಲ್ಲಿ ಕನ್ನಡ ಶಾಲೆಗಳು ಇಲ್ಲವೋ ಅಲ್ಲೆಲ್ಲಾ ಕನ್ನಡ ಶಾಲೆಗಳನ್ನು ಆರಂಭಿಸಿ, ಯಾವುದೇ ಹಳ್ಳಿಗಳಲ್ಲಿ ಕನ್ನಡ ಶಾಲೆ ಇಲ್ಲದಂತೆ ಮಾಡಲಿದ್ದಾರೆ.
ಈ ಬಗ್ಗೆ ತಮ್ಮ ಪ್ರಣಾಳಿಕೆಯಲ್ಲಿಯೂ ತಿಳಿಸಿದ್ದಾರೆ ಎಂದು ಮಂಗಲಾ ಮೆಟಗುಡ್ಡ ಪರ ಡಾ.ಪ್ರಭಾಕರ್ ಕೋರೆ ಬ್ಯಾಟಿಂಗ್ ಬೀಸಿದರು.ಇನ್ನು ಬೆಂಗಳೂರಿನ ನಂತರ ಬೆಳಗಾವಿಯಲ್ಲಿ ಇಷ್ಟೊಂದು ಸುಂದರವಾದ ಕಟ್ಟಡ ನಿರ್ಮಾಣವಾಗಿದೆ. ಅಲ್ಲದೇ ಈ ಕಟ್ಟಡದ ಮೇಲೆ ಇಡೀ ಉತ್ತರಕರ್ನಾಟಕದಲ್ಲಿಯೇ ಉತ್ತಮವಾದ ನಾಟಕ ಮಂದಿರ ನಿರ್ಮಾಣ ಮಾಡಬೇಕು ಎನ್ನುವುದು ನಮ್ಮ ಇಚ್ಛೆಯಿದೆ. ಇದಕ್ಕೆ ಯಡಿಯೂರಪ್ಪ ಅವರು 3 ಕೋಟಿ ಅನುದಾನ ನೀಡಿದ್ದಾರೆ ಎಂದು ಸ್ಮರಿಸಿಕೊಂಡರು.ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ಮಂಗಲಾ ಮೆಟಗುಡ್ಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.