ಬಿಟ್ ಕಾಯಿನ್ ದಂಧೆಯಲ್ಲಿ ಕಾಂಗ್ರೆಸ್‍ನವರು ಇದ್ದರೆ ಅವರನ್ನು ಬಂಧಿಸಲಿ ಎಂದು ಸಿಎಂ ಬೊಮ್ಮಾಯಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಕರ್ನಾಟಕದಲ್ಲಿ ಬಿಟ್ ಕಾಯಿನ್ ದಂಧೆಯ ಕುರಿತ ಚರ್ಚೆ ತಾರಕಕ್ಕೇರಿದೆ. ಬಿಜೆಪಿ ಮತ್ತು ಕಾಂಗ್ರೆಸ್‍ನವರು ಈ ಕುರಿತು ಪರಸ್ಪರ ಕೆಸರೆರಚಾಟ ಮಾಡಿಕೊಳ್ಳುತ್ತಲೇ ಇದ್ದಾರೆ. ಇದೀಗ ಈ ಕುರಿತು ಮತ್ತೆ ವಾಗ್ದಾಳಿ ನಡೆಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿಯವರು ಇದ್ದಾರೆ ಎನ್ನುವ ಮೂಲಕ ಈ ಹಗರಣದಲ್ಲಿ ಕಾಂಗ್ರೆಸ್‍ನವರಿದ್ದಾರೆಂಬ ಸಿಎಂ ಬಸವರಾಜ ಬೊಮ್ಮಾಯಿ ಅವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಬಿಟ್ ಕಾಯಿನ್ ಕೇಸ್‍ನಲ್ಲಿ ಕಾಂಗ್ರೆಸ್‍ನವರು ಇರುವುದು ಸಾಬೀತಾದರೆ ಬಂಧಿಸಲಿ.
ಈ ಪ್ರಕರಣದ ಬಗ್ಗೆ ಸಿಎಂ ಬೇಜವಾಬ್ದಾರಿತನದ ಹೇಳಿಕೆ ನೀಡ್ತಿದ್ದಾರೆ. ಕಾಂಗ್ರೆಸ್ ಪಕ್ಷದವರು ಭಾಗಿಯಾಗಿದ್ದರೆ ಅವರ ಹೆಸರು ಹೇಳಲಿ. ಅವರದ್ದೇ ಸರ್ಕಾರವಿದೆ, ಆರೋಪಿಗಳ ಹೆಸರು ಹೇಳಲಿ. ಹೆಸರು ಹೇಳಲು ಆಗಿಲ್ಲ ಅಂದ್ರೆ ಸರ್ಕಾರ ಬಿಟ್ಟು ಕೊಡಲಿ. ನಾವು ಅಧಿಕಾರಕ್ಕೆ ಬಂದು ಆರೋಪಿಗಳ ಹೆಸರು ಹೇಳ್ತೇವೆ. ಸಿಎಂ ಈ ರೀತಿ ಮಾತನಾಡಿದ್ದು ನೋಡಿದರೆ ಅನುಮಾನ ಹೆಚ್ಚಾಗುತ್ತಿದೆ. ಅವರೇ ಸಿಕ್ಕಿಹಾಕಿಕೊಂಡಿರುವಂತೆ ನಡೆದುಕೊಳ್ಳುತ್ತಿದ್ದಾರೆ. ಆದ್ರೆ ನಾನು ಎಲ್ಲೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೆಸರು ಹೇಳಿಲ್ಲ. ಆದರೂ ಅವರ ಹೇಳಿಕೆ ನೋಡುತ್ತಿದ್ದರೆ ಅನುಮಾನ ಬರ್ತಿದೆ. ಆರೋಪಿ ಶ್ರೀಕೃಷ್ಣ ಏನು ಹೇಳಿದ್ದಾರೆಂದು ಸರ್ಕಾರ ಬಹಿರಂಗಪಡಿಸಲಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದರೆ.