ಬಿಟ್ ಕಾಯಿನ್ ಪ್ರಕರಣ ಸಿಎಂ ಬಲಿ ಪಡೆಯುತ್ತದೆ. ಈ ಬಾರಿಯೂ ಬಿಜೆಪಿಯಲ್ಲಿ 3 ಸಿಎಂಗಳು ಆಗುತ್ತಾರೆ. ಬಿಟ್ ಕಾಯಿನ್ ದಂಧೆಯಲ್ಲಿ ಬಿಜೆಪಿಯವರಿದ್ದಾರೆ. ಬೇರೆ ಪಕ್ಷದವರು ಭಾಗಿಯಾಗಿದ್ದರೆ ತನಿಖೆ ಮಾಡಿಸಲಿ. ತನಿಖೆಯಲ್ಲಿ ಯಾರಿದ್ದಾರೆಂದು ಬಹಿರಂಗವಾಗಲಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.
ಕಲಬುರ್ಗಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ ಅವರು ಹ್ಯಾಕರ್ ಶ್ರೀಕಿಯಿಂದ ಜಪ್ತಿ ಮಾಡಿದ ಬಿಟ್ ಕಾಯಿನ್ ಎಲ್ಲಿ..? 35 ಬಿಟ್ ಕಾಯಿನ್‍ಗಳನ್ನು ಜಪ್ತಿ ಮಾಡಿದ್ದಾಗಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಈ ಹಗರಣದ ತನಿಖೆಯನ್ನು ಉನ್ನತ ಮಟ್ಟದ ಸಮಿತಿಗೆ ವಹಿಸಲು ವಿಳಂಬವೇಕೆ ಎಂದು ಪ್ರಶ್ನಿಸಿದರು.
ಇನ್ನು ಹಗರಣದಲ್ಲಿ ಸಿಎಂ ಭಾಗಿಯಾಗಿದ್ದಾರೆ ಎಂದು ಹೇಳುತ್ತಿಲ್ಲ. ಈ ಹಗರಣದ ಪಾರದರ್ಶಕ ತನಿಖೆಯಾದರೆ ರಾಜ್ಯದಲ್ಲಿ ಮತ್ತೆ ಬಿಜೆಪಿಯ 3ನೇ ಮುಖ್ಯಮಂತ್ರಿ ನೋಡುತ್ತೇವೆ. ಇದರಲ್ಲಿ ಯಾರು ಇದ್ದಾರೆಂದು ತನಿಖಾಧಿಕಾರಿಗಳಿಗೆ ಗೊತ್ತಿದೆ. ಸರಿಯಾದ ತನಿಖಾ ಏಜೆನ್ಸಿಗೆ ನೀಡಿದರೆ ಪ್ರಕರಣ ಬಯಲಾಗುತ್ತೆ. ಈ ಹಗರಣದಲ್ಲಿ ಅಧಿಕಾರಿಗಳೂ ಭಾಗಿಯಾಗಿದ್ದಾರೆ. ಇದು ಕೇವಲ 200-300 ಕೋಟಿ ರೂಪಾಯಿಯ ಹಗರಣವಲ್ಲ. ಬಿಜೆಪಿಯವರು ಕ್ರಿಪ್ಟೋ ಕರೆನ್ಸಿಯಲ್ಲಿ ಲಂಚ ತೆಗೆದುಕೊಂಡಿದ್ದಾರೆ. ಡ್ರಗ್ಸ್ ಕೇಸ್ ಸೇರಿ ಎಲ್ಲ ಕೇಸ್ ಮುಚ್ಚಿಹಾಕಲು ಲಂಚ ಪಡೆದಿದ್ದಾರೆ. ಸರ್ಕಾರದಲ್ಲಿರುವ ಹಲವರು ಇದರಲ್ಲಿದ್ದಾರೆ. ಬಿಟ್ ಕಾಯಿನ್ ಹಗರಣ ಪಾರದರ್ಶಕವಾಗಿ ತನಿಖೆ ಮಾಡಿದರೆ ಈ ಸರ್ಕಾರಕ್ಕೆ ತೊಂದರೆಯಾಗಲಿದೆ ಎಂದು ಆರೋಪಿಸಿದರು.