Breaking News

ಇಬ್ಬರು ಜೆಡಿಎಸ್ ಶಾಸಕರು ಬಿಜೆಪಿಯತ್ತ

Spread the love

ಹಾನಗಲ್ ಮತ್ತು ಸಿಂಧಗಿ ಕ್ಷೇತ್ರದ ಜೆಡಿಎಸ್ ಪಕ್ಷದ ಸೋಲಿನಿಂದಾಗಿ ಮತ್ತಷ್ಟು ದಳದ ನಾಯಕರು ಪಕ್ಷದಿಂದ ವಿಮುಖರಾಗುತ್ತಿದ್ದಾರಾ ಎನ್ನುವ ಚರ್ಚೆ ಹಲವು ದಿನಗಳಿಂದ ಚಾಲ್ತಿಯಲ್ಲಿದೆ. ಅದಕ್ಕೊಂದು ಉದಾಹರಣೆಯೆಂದರೆ, ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಜೆಡಿಎಸ್ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ ಗೈರಾಗಿದ್ದದ್ದು.

 

ಎರಡು ದಿನಗಳ ಹಿಂದೆ ಪಕ್ಷದ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಕುಮಾರಸ್ವಾಮಿ, ಇನ್ನಷ್ಟು ನಮ್ಮ ಮುಖಂಡರು ಪಕ್ಷವನ್ನು ತ್ಯಜಿಸಲಿದ್ದಾರೆ ಎನ್ನುವ ಮಾತನ್ನು ಹೇಳಿದ್ದರು. ಈ ವಿಚಾರ ನನಗೆ ಮೊದಲೇ ಗೊತ್ತಿದೆ ಎಂದೂ ಎಚ್‌ಡಿಕೆ ಹೇಳಿದ್ದರು.

ಜೆಡಿಎಸ್ ಪಕ್ಷದ ಹಲವು ನಾಯಕರು ಕಾಂಗ್ರೆಸ್ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನುವ ಮಾತನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದರು. ಕೋಲಾರ ಶಾಸಕ ಶ್ರೀನಿವಾಸ ಗೌಡ, ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್, ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಮುಂತಾದವರು ಬಹಿರಂಗವಾಗಿಯೇ ಪಕ್ಷದ ಮೇಲಿನ ತಮ್ಮ ಮುನಿಸನ್ನು ಹೊರಹಾಕುತ್ತಿದ್ದಾರೆ.

ಈ ಪಟ್ಟಿಗೆ ಇನ್ನಿಬ್ಬರು ಶಾಸಕರು ಸೇರ್ಪಡೆಯಾಗುವ ಸಾಧ್ಯತೆಗಳು ದಿನದಿಂದ ದಿನಕ್ಕೆ ದಟ್ಟವಾಗುತ್ತಿದೆ. ಈ ಇಬ್ಬರು ಶಾಸಕರು ಬಿಜೆಪಿ ಕದ ತಟ್ಟುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದನ್ನು, ಪರೋಕ್ಷವಾಗಿ ಬಿಜೆಪಿ ಮುಖಂಡರು ಹೌದೆಂದಿದ್ದಾರೆ. ಆ ಎರಡು ಮುಖಂಡರು ಯಾರು?

ಯಾರು ಯಾವಾಗ ಪಕ್ಷ ಬಿಡುತ್ತಾರೆ ಎನ್ನುವ ಮಾಹಿತಿ ನನಗೆ 2 ವರ್ಷಗಳ ಹಿಂದೆಯೇ ಇದೆ“ಪಕ್ಷ ಬಿಟ್ಟವರಿಂದ ಸಂಘಟನೆಗೆ ಯಾವುದೇ ಶಕ್ತಿ ಬಂದಿಲ್ಲ. ಪಕ್ಷದಿಂದ ಅನುಕೂಲ ಪಡೆದುಕೊಂಡು ಕೆಲವರು ಹೋಗುತ್ತಿದ್ದಾರೆ. ಯಾರು ಯಾವಾಗ ಪಕ್ಷ ಬಿಡುತ್ತಾರೆ ಎನ್ನುವ ಮಾಹಿತಿ ನನಗೆ ಎರಡು ವರ್ಷಗಳ ಹಿಂದೆಯೇ ಇದೆ. ಮಾಧ್ಯಮದವರಾದ ನಿಮಗೆ ಈಗ ಅದು ಹೊಸದು ಅನ್ನಿಸಬಹುದು. ಕೆಲವರು ದೈಹಿಕವಾಗಿ ಇಲ್ಲೇ ಇರಬಹುದು. ಮಾನಸಿಕವಾಗಿ ಬೇರೆ ಕಡೆ ಹೋಗಿದ್ದಾರೆ. ಬಿಜೆಪಿ, ಜೆಡಿಎಸ್ ನಿಂದ ನಮ್ಮ ಪಕ್ಷಕ್ಕೆ ಬರುತ್ತಾರೆ ಅಂತಾ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಅದರಿಂದ ನನಗೆ ಯಾವ ಶಾಕ್ ಆಗೋದಿಲ್ಲ”ಎಂದು ಎಚ್.ಡಿ.ಕುಮಾರಸ್ವಾಮಿಯವರು ಎರಡು ದಿನದ ಹಿಂದೆ ಹೇಳಿದ್ದರು.

 ಸಂದೇಶ್ ನಾಗರಾಜ್ ಮತ್ತು ಸಿನಿಮಾ ನಿರ್ಮಾಪಕ ಸಿ.ಆರ್.ಮನೋಹರ್

ಜೆಡಿಎಸ್ ಚಿಹ್ನೆಯಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಇಬ್ಬರು, ಪಕ್ಷ ಬಿಡಲು ಮುಂದಾಗಿದ್ದು, ಬಿಜೆಪಿ ಸೇರಲು ಸಜ್ಜಾಗುತ್ತಿದ್ದಾರೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಇದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಉದ್ಯಮಿಗಳಾಗಿರುವ ಎಸ್.ನಾಗರಾಜ್ (ಸಂದೇಶ್ ನಾಗರಾಜ್) ಮತ್ತು ಉದ್ಯಮಿ ಮತ್ತು ಸಿನಿಮಾ ನಿರ್ಮಾಪಕರೂ ಆಗಿರುವ ಸಿ.ಆರ್.ಮನೋಹರ್, ಈ ಇಬ್ಬರು ಬಿಜೆಪಿ ಸೇರುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

 ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್

ಈ ವಿಚಾರದ ಬಗ್ಗೆ ಮಾತನಾಡುತ್ತಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, “ಯಾರು ಬೇಕಾದರು ಪಕ್ಷಕ್ಕೆ ಬರಬಹುದು, ಅರ್ಜಿ ಹಾಕಲಿ ಕೋರ್ ಕಮಿಟಿಯಲ್ಲಿ ಚರ್ಚೆಯಾಗುತ್ತೆ. ಟಿಕೆಟ್ ನೀಡುವ ನಿರ್ಧಾರವನ್ನು ಹೈಕಮಾಂಡ್ ಮಾಡಲಿದೆ. ಸಂದೇಶ್ ನಾಗರಾಜ್ ಅವರು ಈಗಾಗಲೇ ಬಿಜೆಪಿ ಟಿಕೆಟಿಗೆ ಅರ್ಜಿ ಹಾಕಿದ್ದಾರೆ, ಪಕ್ಷಕ್ಕೆ ಬರುವುದಾಗಿ ಹೇಳಿದ್ದಾರೆ. ಸಿ.ಆರ್.ಮನೋಹರ್ ಕೂಡ ಬರುವ ಬಗ್ಗೆ ಚರ್ಚೆಯಿದೆ, ಟಿಕೆಟಿಗೆ ಮೊದಲು ಅರ್ಜಿ ಹಾಕಲಿ” ಎಂದು ರವಿಕುಮಾರ್ ಹೇಳಿದ್ದಾರೆ.

 ಜೆಡಿಎಸ್ ಚಿಹ್ನೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದರು

ಮೈಸೂರು ಸ್ಥಳೀಯ ಕ್ಷೇತ್ರದಿಂದ ಸಂದೇಶ್ ನಾಗರಾಜ್ ಮತ್ತು ಕೋಲಾರ ಸ್ಥಳೀಯ ಕ್ಷೇತ್ರದಿಂದ ಸಿ.ಆರ್.ಮನೋಹರ್, ಜೆಡಿಎಸ್ ಚಿಹ್ನೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದರು. ಇವರಿಬ್ಬರ ಅವಧಿ ಜನವರಿ 5, 2022ರವರೆಗೆ ಇರಲಿದೆ. ಹಾಗಾಗಿ, ಇವರಿಬ್ಬರು ಈಗ ಬಿಜೆಪಿಯಿಂದ ಆಯ್ಕೆಯಾಗಲು ಬಯಸುತ್ತಿದ್ದಾರೆ. ಆದರೆ, ಜೆಡಿಎಸ್ ತೊರೆಯುವ ನಿರ್ಧಾರವನ್ನು ಮನೋಹರ್ ನಿರಾಕರಿಸಿದ್ದಾರೆ. “ನಾನು ಬಿಜೆಪಿ ಸೇರುತ್ತೇನೆ ಎಂದು ಹರಡಿರುವ ಸುದ್ದಿ ಸುಳ್ಳು. ನಾನು ಈವರೆಗೂ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಕೆಲಸ ಮಾಡಿಲ್ಲ. ಆದರೂ ಪಕ್ಷದಲ್ಲಿ ನನ್ನನ್ನು ಕಡೆಗಣಿಸಲಾಗಿದೆ. ನನ್ನ ಅವಧಿ ಮುಗಿದ ಬಳಿಕ ದೇವೇಗೌಡರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ” ಮನೋಹರ್ ಹೇಳಿದ್ದಾರೆ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ